ADVERTISEMENT

ಆಶಾಗೆ ಮಹಿಳಾ ಆಯೋಗದ ಅಧ್ಯಕ್ಷರಿಂದ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 9:00 IST
Last Updated 27 ಜುಲೈ 2012, 9:00 IST
ಆಶಾಗೆ ಮಹಿಳಾ ಆಯೋಗದ ಅಧ್ಯಕ್ಷರಿಂದ ಸಾಂತ್ವನ
ಆಶಾಗೆ ಮಹಿಳಾ ಆಯೋಗದ ಅಧ್ಯಕ್ಷರಿಂದ ಸಾಂತ್ವನ   

ಮಂಡ್ಯ: ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಆಶಾ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಆಗಮಿಸಿ, ಘಟನೆ ಬಗೆಗೆ ಹಾಗೂ ಆಸ್ಪತ್ರೆಯಲ್ಲಿ ದೊರೆ ಯುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಡನೆ ಮಾತನಾಡಿ, ಆಕೆಗೆ ತಾನು ಒಬ್ಬಂಟಿ ಎನಿಸಿದೆ. ಆಕೆ ಮನಸ್ಸು ಭದ್ರ ಗೊಳಿಸುವ ಕೆಲಸ ಆಗಬೇಕಿದೆ. ಆಕೆ ಬಯಸಿದರೆ ಮೈಸೂರು ಅಥವಾ ಮಂಡ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಘಟನೆಯಿಂದ ಆತಂಕಗೊಂಡಿದ್ದಾಳೆ. ಹೀಗಾಗಿ, ವೈದ್ಯಕೀಯ ಸಮಾಲೋಚನೆ ಕೂಡ ಆಗಬೇಕಿದೆ ಎಂದರು.
ಸದನದಲ್ಲಿ ಚರ್ಚೆ ನಡೆಯಲಿ: ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಈಗ ಕಲಾಪ ನಡೆಯುತ್ತಿದೆ.

`ಮಹಿಳೆಯರ ವಿರುದ್ಧ ದೌರ್ಜನ್ಯ~ ಕುರಿತಂತೆ ಅಲ್ಲಿ ವಿಶೇಷ ಚರ್ಚೆ ಆಗಬೇಕಿದೆ. ದೌರ್ಜನ್ಯ ನಿಗ್ರಹ ಸಂಬಂಧ ವಿಶೇಷ ಕ್ರಮ ತೆಗೆದುಕೊಳ್ಳುವಂತಹ ನಿರ್ಧಾರ ಆಗಬೇಕು ಎಂದು ಹೇಳಿದರು.

ಮಹಿಳೆಯರಿಗೆ ಭದ್ರತೆ ಹೆಚ್ಚಿಸುವ ಸಂಬಂಧ 28ರಂದು ರೈಲ್ವೆ ಅಧಿಕಾರಿಗಳ ಜತೆ ಮೈಸೂರಿನಲ್ಲಿ ಚರ್ಚೆ ನಡೆಸುವುದಾಗಿ ಹೇಳಿದರು. ಶಾಸಕ ಅಶ್ವತ್ಥನಾರಾಯಣ ಹಾಗೂ ಆಯೋಗದ ಸದಸ್ಯರು ಹಾಜರಿದ್ದರು.

ದಸಂಸ ಸಭೆ ಯಶ್ವಸಿ
ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಭೆ ಇತ್ತೀಚೆಗೆ ನಗರದಲ್ಲಿ ನಡೆಯಿತು. ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಸಂಚಾಲಕರನ್ನಾಗಿ ಎಂ.ಬಿ.ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.