ADVERTISEMENT

ಉಪ ಚುನಾವಣೆ ತಡೆಗೆ ಕಾಯ್ದೆ ಅಗತ್ಯ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:35 IST
Last Updated 25 ಮಾರ್ಚ್ 2011, 7:35 IST

ಮೈಸೂರು: ‘ಆಪರೇಷನ್ ಕಮಲದಿಂದ ಉಪ ಚುನಾವಣೆಗಳು ನಡೆಯುತ್ತಿವೆ. ಚುನಾವಣೆಗಳಿಗೆ ಸಾಕಷ್ಟು ವೆಚ್ಚ ಮಾಡಲಾಗುತ್ತಿದೆ. ಉಪ ಚುನಾವಣೆಗಳನ್ನು ತಡೆಗಟ್ಟಲು ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರುವ ಅಗತ್ಯ ಇದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಇಲ್ಲಿ ತಿಳಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಆಗಾಗ್ಗೆ ಭಿನ್ನಮತ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡು ರಾಜ್ಯವನ್ನೇ ಸುಟ್ಟು ಹಾಕುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದೆ.ಈಗಾಗಲೇ ಐದು ಬಾರಿ ಭಿನ್ನಮತ ಕಾಣಿಸಿಕೊಂಡು ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ಭಿನ್ನಮತ ಶಮನ ಮಾಡಲು ವಿಫಲವಾಗಿರುವ ಬಿಜೆಪಿ ಹೈಕಮಾಂಡ್ ‘ನೋ ಕಮಾಂಡ್’, ‘ಲೋ ಕಮಾಂಡ್’ ಆಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಪ್ರೇರಣಾ ಟ್ರಸ್ಟ್‌ಗೆ ರೂ.25 ಕೋಟಿಯನ್ನು ಹೂಡಿಕೆ ಮಾಡಲಾ ಗಿದೆ. ಈ ಕುರಿತು ವಿಧಾನ ಪರಿಷತ್ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಧರಣಿ ನಡೆಸಿ ಯಡಿ ಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಯಡಿ ಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಬದಲಾವಣೆ ಮಾಡದೇ ಇರುವುದನ್ನು ನೋಡಿದರೆ ಭ್ರಷ್ಟಾ ಚಾರದ ಹಣದಲ್ಲಿ ಬಿಜೆಪಿ ವರಿಷ್ಠರಿಗೂ ಪಾಲು ದೊರೆಯುತ್ತಿರ ಬಹುದು’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಅವರು ಅಧಿಕಾರ ನಡೆಸುವುದನ್ನು ಬಿಟ್ಟು ವಿರೋಧ ಪಕ್ಷವನ್ನು ತೆಗಳುತ್ತಿರು ತ್ತಾರೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಟ ಮಾಡಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿ ಸಿದ್ದರು. ಇದು ಯಡಿ ಯೂರಪ್ಪ ಅವರ ಅಸಹಾಯಕತೆ ಯನ್ನು ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ.ದಾಸೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್, ಮುಖಂಡರಾದ ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.