ADVERTISEMENT

ಐದು ರೂಪಾಯಿ ಡಾಕ್ಟರ್‌ಗೆ ಜೆಡಿಎಸ್‌ ಟಿಕೆಟ್‌?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 8:37 IST
Last Updated 25 ಅಕ್ಟೋಬರ್ 2017, 8:37 IST
ಚಿಕಿತ್ಸೆ ನೀಡುತ್ತಿರುವ ಡಾ.ಎಸ್‌.ಸಿ.ಶಂಕರೇಗೌಡ
ಚಿಕಿತ್ಸೆ ನೀಡುತ್ತಿರುವ ಡಾ.ಎಸ್‌.ಸಿ.ಶಂಕರೇಗೌಡ   

ಮಂಡ್ಯ: ‘ಜೆಡಿಎಸ್‌ ವರಿಷ್ಠರು ಸೂಟ್‌ಕೇಸ್‌, ಬಕೆಟ್‌ ಸಂಸ್ಕೃತಿ ಬಿಟ್ಟು ನಮ್ಮ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಅವರಿಗೆ ಟಿಕೆಟ್‌ ನೀಡಿದರೆ ಅವರು ಗೆದ್ದು ಬಂದು ಬಡವರ ಕೆಲಸ ಮಾಡಿಕೊಡುತ್ತಾರೆ. ರೆಬಲ್‌ ಸ್ಟಾರ್‌ ಅವತಾರಗಳನ್ನು ನೋಡಿ ಸಾಕಾಗಿದೆ’ ಎಂದು ನಗರದ ಆರ್‌.ಪಿ ರಸ್ತೆಯಲ್ಲಿರುವ ಐದು ರೂಪಾಯಿ ಕ್ಲಿನಿಕ್‌ಗೆ ಚಿಕಿತ್ಸೆಗೆಂದು ಬಂದಿದ್ದ ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದ ಸಣ್ಣನಂಜೇಗೌಡ ಹೇಳಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿದೆ. ಕ್ಷೇತ್ರದ ಶಾಸಕ ಅಂಬರೀಷ್‌ ವರ್ಷಗಟ್ಟಲೆ ಕ್ಷೇತ್ರದಿಂದ ಗೈರು ಹಾಜರಾಗಿರುವ ಕಾರಣ ಜನರು ಹೊಸ ಮುಖವೊಂದನ್ನು ಬಯಸುತ್ತಿದ್ದಾರೆ ಎಂಬುದಕ್ಕೆ ಸಣ್ಣನಂಜೇಗೌಡರ ಮನದಾಳವೇ ಸಾಕ್ಷಿಯಾಗಿದೆ.

ಇದು ಕೇವಲ ಜನರ ಅಭಿಪ್ರಾಯವೂ ಆಗಿರದೆ; ಶಂಕರೇಗೌಡ ಅವರಿಗೆ ಈ ಬಾರಿ ಜೆಡಿಎಸ್‌ನಿಂದ ಟಿಕೆಟ್‌ ಸಿಗಬೇಕು ಎಂದು ವರಿಷ್ಠರನ್ನು ಜೆಡಿಎಸ್‌ ಮುಖಂಡರು ಹಾಗೂ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಕಾರ್ಯಕರ್ತರು ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಅವರು ಟಿಕೆಟ್‌ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್‌ ಮುಖಂಡರು ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ಡಾ.ಶಂಕರೇಗೌಡ ಅವರು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಜಿಲ್ಲೆಯಾದ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಃ ರೈತರೂ ಆಗಿರುವ ಶಂಕರೇಗೌಡರು ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ನಾಲೆಗೆ ಬರುವ ಕೆಆರ್‌ಎಸ್‌ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಜನರಿಗೆ ಮಾರ್ಗದರ್ಶನ ಮಾಡಿದ್ದಾರೆ. ಮೈಷುಗರ್‌ ಕಾರ್ಖಾನೆ ಪುನಾರಂಭಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಚರ್ಮರೋಗ ತಜ್ಞರಾಗಿರಾಗಿದ್ದು, ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡುವುದು ಅವರು ಕಾಳಜಿ. ಅವರಿಗೆ ಟಿಕೆಟ್‌ ಕೊಟ್ಟರೆ ಎಲ್ಲಾ ಜೆಡಿಎಸ್‌ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

‘2004ರಲ್ಲೇ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದ್ದರು. ಆದರೆ,  ಆಗ ನನಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. 2010ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೆ. ಒಂದು ರೂಪಾಯಿ ಹಣವನ್ನೂ ಖರ್ಚು ಮಾಡದೆ ಗೆದ್ದು, ಉಪಾಧ್ಯಕ್ಷನಾಗಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಮ್ಮ ಮನೆಗೆ ಬಂದು ಸೂಕ್ತ ಕಾಲದಲ್ಲಿ ವಿಧಾನಸಭೆ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರು.

ಈಗ ನಾನು ಮಂಡ್ಯ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಾರ್ಯಕರ್ತರು ಹಾಗೂ ಜನರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಾನು ಇನ್ನೂ ವರಿಷ್ಠರನ್ನು ನೇರವಾಗಿ ಭೇಟಿ ಮಾಡಿ ಟಿಕೆಟ್‌ ಕೇಳಿಲ್ಲ. ಶೀಘ್ರ ಭೇಟಿ ಮಾಡಿ ಟಿಕೆಟ್‌ ಕೇಳುತ್ತೇನೆ’ ಎಂದು ಡಾ.ಶಂಕರೇಗೌಡ ತಿಳಿಸಿದರು.

ಆಕಾಂಕ್ಷಿಗಳ ದೊಡ್ಡ ಪಟ್ಟಿ: ಕ್ಷೇತ್ರದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ತುದಿಗಾಲಮೇಲೆ ನಿಂತಿದ್ದಾರೆ. ಈಗಾಗಲೇ ಹಲವರು ವಿವಿಧ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಮುಂಬರುವ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಪ್ರಚಾರಕ್ಕೆ ಇಳಿದಿದ್ದಾರೆ. ಅವರಲ್ಲಿ, ಕಳೆದ ಬಾರಿ ಅಂಬರೀಷ್‌ ಎದುರು ಸೋಲು ಕಂಡ ಎಂ.ಶ್ರೀನಿವಾಸ್‌ ಮೊದಲಿಗರಾಗಿದ್ದಾರೆ. ಎಸ್‌.ಡಿ.ಜಯರಾಂ ಅವರ ಕುಟುಂಬಕ್ಕೆ ರಾಜಕೀಯವಾಗಿ ಮರುಜೀವ ನೀಡಬೇಕು ಎಂಬ ಒತ್ತಡ ಪಕ್ಷದ ವರಿಷ್ಠರಲ್ಲಿ ಇದ್ದು ಜಯರಾಂ ಪುತ್ರ ಅಶೋಕ್‌ ಜಯರಾಂ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಇದೆ.

‌ಕಳೆದ ವಿಧಾನ ಪರಿಷತ್‌ ಚುನಾವಣೆ ವೇಳೆ ಟಿಕೆಟ್‌ ವಂಚಿತರಾದ ಕಾವೇರಿ ನರ್ಸಿಂಗ್‌ ಹೋಂ ಸ್ಥಾಪಕ ಡಾ.ಕೃಷ್ಣ ಅವರ ಹೆಸರೂ ಕೇಳಿ ಬರುತ್ತಿದ್ದು ಅವರು ಈಗಾಗಲೇ ವಿವಿಧ ಕಾರ್ಯಕ್ರಮ ನಡೆಸುತ್ತಿದ್ದು ಸಂಘ,ಸಂಸ್ಥೆಗಳಿಗೆ ಧಾರಾಳವಾಗಿ ದಾನ ನೀಡುತ್ತಿದ್ದಾರೆ. ಇವರ ಜೊತೆಗೆ ಮೈಷುಗರ್‌, ಮುಡಾ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಎನ್‌.ಶಿವಣ್ಣ, ಕೆ.ವಿ.ಶಂಕರಗೌಡರ ಮೊಮ್ಮಗ ವಿಜಯಾನಂದ, ಗುತ್ತಿಗೆದಾರ ಕೆ.ಕೆ.ರಾಧಾಕೃಷ್ಣ ಅವರ ಹೆಸರುಗಳಿವೆ.

‘ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನನಗೆ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. ಡಾ.ಶಂಕರೇಗೌಡ ಅವರು ಆಕಾಂಕ್ಷಿಯಾಗಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್‌ ತಿಳಿಸಿದರು. ‘ಸೆ.11ರಂದು ಬೆಂಗಳೂರಿನಲ್ಲಿ ಆಕಾಂಕ್ಷಿಗಳ ಸಭೆ ನಡೆದಾಗ ಡಾ.ಶಂಕರೇಗೌಡ ಅವರು ಹಾಜರಾಗಿರಲಿಲ್ಲ. ಜೊತೆಗೆ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯ ಹೆಸರು ಇನ್ನೂ ಚರ್ಚೆಯಾಗಿಲ್ಲ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.