ADVERTISEMENT

ಕರಿಘಟ್ಟದಲ್ಲಿ ‘ಮರಗಳ ಜತೆ ಮಾತುಕತೆ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:16 IST
Last Updated 1 ಮಾರ್ಚ್ 2018, 11:16 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದಲ್ಲಿ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ಬುಧವಾರ ನಡೆದ ‘ಮರಗಳ ಜತೆ ಮಾತುಕತೆ’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಹರವು ದೇವೇಗೌಡ ಶಿಬಿರಾರ್ಥಿಗಳಿಗೆ ವನ್ಯ ಸಂಪತ್ತು ಕುರಿತು ಮಾಹಿತಿ ನೀಡಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದಲ್ಲಿ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ಬುಧವಾರ ನಡೆದ ‘ಮರಗಳ ಜತೆ ಮಾತುಕತೆ’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಹರವು ದೇವೇಗೌಡ ಶಿಬಿರಾರ್ಥಿಗಳಿಗೆ ವನ್ಯ ಸಂಪತ್ತು ಕುರಿತು ಮಾಹಿತಿ ನೀಡಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಬುಧವಾರ ನಡೆದ ‘ಮರಗಳ ಜತೆ ಮಾತುಕತೆ’ಯಲ್ಲಿ ಬಗೆ ಬಗೆಯ ಹುಲ್ಲು, ಮರಗಳು ಹಾಗೂ ಪಕ್ಷಿಗಳು ಗೋಚರವಾದವು.

ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ಬುಧವಾರ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹಲವು ವಿಶೇಷಗಳನ್ನು ಕಂಡ ಪುಳಕಿತರಾದರು.

ಲೇಖಕ ಹರವು ದೇವೇಗೌಡ ‘ಮರಗಳ ಜತೆ ಮಾತುಕತೆ’ಯ ನೇತೃತ್ವ ವಹಿಸಿ ಬಗೆ ಬಗೆಯ ಸಸ್ಯ ಸಂಕುಲವನ್ನು ಶಿಬಿರಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ಕರಿಘಟ್ಟ ಅರಣ್ಯದಲ್ಲಿ ಸುತ್ತಾಡಿದ ಎನ್‌ಎಸ್‌ಎಸ್‌ ಶಿಬಿರದ 50 ಶಿಬಿರಾರ್ಥಿಗಳ ತಂಡ ಆಲ, ಹುಣಸೆ, ಮುಳ್ಳಿ, ಗೋಣಿ, ಕಾಡು ಬಾಗೆ, ಮುತ್ತುಗ, ಹೊಂಗೆ, ಬುಗುರಿ, ಹಲಸು, ನೇರಳೆ, ಪನ್ನೇರಳೆ, ತಂಗಡಿ, ಸಿಸು ಮೊದಲಾದ ಮರಗಳನ್ನು ವೀಕ್ಷಿಸಿತು. ವಿದ್ಯಾರ್ಥಿಗಳು ಈ ಮರಗಳನ್ನು ಕೈಯಿಂದ ಮುಟ್ಟಿ ಖುಷಿಪಟ್ಟರು.

ADVERTISEMENT

ಹರವು ದೇವೇಗೌಡ ಪ್ರತಿ ಮರದ ಮಹತ್ವ ಕುರಿತು ಉದ್ದಕ್ಕೂ ಮಾಹಿತಿ ನೀಡಿದರು. ಬುಗುರಿ ಮರದ ಎಲೆ, ಹೂ, ಕಾಯಿ ಮತ್ತು ತೊಗಟೆಯ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು. ಅರಳಿ ಮರದ ಬಳಿ ನಿಂತು ‘ಇದು ಆಲದ ಮರಕ್ಕಿಂತ 20 ಪಟ್ಟು ಅಧಿಕ ಆಮ್ಲಜನಕ ಕೊಡುತ್ತದೆ’ ಎಂದರು. ಆಲದ ಮರದ ಕಾಂಡ, ಎಲೆ, ಹಣ್ಣು, ಸೊಪ್ಪಿನ ಉಪಯೋಗವನ್ನು ತಿಳಿಸಿಕೊಟ್ಟರು. ಸತ್ತ ಮೇಲೂ ಮರ ಹೇಗೆ ಬಳಕೆ ಬರುತ್ತದೆ ಎಂಬುದನ್ನು ತಿಳಿಸಿದರು. ಮುತ್ತುಗದ ಎಲೆ, ಹೂ ಮತ್ತು ವಿವಿಧ ಋತುಗಳಲ್ಲಿ ಬದಲಾಗುವ ಅದರ ಚಹರೆಗಳನ್ನು ಅವರು ವಿವರಿಸಿದರು. ಸಹಜವಾಗಿ ಬೆಳೆಯುವ ನಾಲೆ ಹುಲ್ಲು, ಕಾಡು ಈರುಳ್ಳಿ, ಕಡ್ಡಿ ಮುರುಕನ ಸೊಪ್ಪು, ಎಕ್ಕದ ಗಿಡ, ಕೊನ್ನಾರಿ, ಕಳ್ಳಿ ಜಾತಿಯ ಗಿಡ ಇತರ ಸಸ್ಯಗಳ ಕುರಿತು ಅವರು ವಿವರಿಸಿ ಶಿಬಿರಾರ್ಥಿಗಳ ಕುತೂಹಲವನ್ನು ತಣಿಸಿದರು.

‘10 ಬಿಲಿಯನ್‌ ವರ್ಷಗಳ ಹಿಂದೆ ಉಂಟಾದ ಜ್ವಾಲಾಮುಖಿ ಸ್ಫೋಟದಿಂದ ಕರಿಘಟ್ಟ ಗುಡ್ಡ ಸೃಷ್ಟಿಯಾಗಿದೆ. ಇದರ ಒಂದು ಚೂರು ಚಿತ್ರದುರ್ಗದ ಬಳಿ ಬಿದ್ದಿರುವುದನ್ನು ತಜ್ಞರು ಪತ್ತೆ ಮಾಡಿದ್ದಾರೆ’ ಎಂದು ದೇವೇಗೌಡ ತಿಳಿಸಿದರು. ಶಿಬಿರಾರ್ಥಿಗಳು ಮರಗಳ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಕೇವಲ ಮೂರು ಅಡಿ ದೂರದ ಈಚಲು ಮರದ ಬುಡದಿಂದ ಗೌಜುಗದ ಹಕ್ಕಿಯೊಂದು ಪುರ್ರನೆ ಹಾರಿತು. ಈ ಅಪೂರ್ವ ದೃಶ್ಯವನ್ನು ಕಂಡು ವಿದ್ಯಾರ್ಥಿಗಳು ಪುಳಕಿತರಾದರು.

ಕೊಳದ ಸ್ವಚ್ಛತೆ: ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು ಕರಿಘಟ್ಟದ ಶ್ರೀನಿವಾಸ ದೇವಾಲಯದ ಪೂರ್ವಕ್ಕೆ 200 ಮೀಟರ್‌ ದೂರದಲ್ಲಿ ಮುಚ್ಚಿ ಹೋಗಿದ್ದ ಕೊಳವೊಂದನ್ನು ಬುಧವಾರ ಸ್ವಚ್ಛಗೊಳಿಸಿದರು. ಸುಮಾರು 50 ಅಡಿ ಆಳ ಇರುವ ಈ ಕೊಳದ ಒಳಗೆ ತುಂಬಿದ್ದ ತ್ಯಾಜ್ಯವನ್ನು ಹೊರಗೆ ಸಾಗಿಸಿದರು. ಸುತ್ತಲೂ ಬೆಳೆದಿದ್ದ ಹುಲ್ಲು ಹಾಗೂ ಮುಳ್ಳು ಗಿಡಗಳನ್ನು ಕತ್ತರಿಸಿ ತೆಗೆದರು, ಕೊಳಕ್ಕೆ ಇಳಿಯಲು ಅನುಕೂಲ ಆಗುವಂತೆ ಕಲ್ಲುಗಳಿಂದ ತಾತ್ಕಾಲಿಕ ಮೆಟ್ಟಿಲುಗಳನ್ನು ನಿರ್ಮಿಸಿದರು. ಸ್ಥಳೀಯರಾದ ಶ್ರೀನಾಥ್‌, ತುಳಸಿಕುಮಾರ್‌ ಇತರರು ಶಿಬಿರಾರ್ಥಿಗಳ ಕೆಲಸಕ್ಕೆ ಕೈ ಜೋಡಿಸಿದರು.

ಶಿಬಿರಾಧಿಕಾರಿಗಳಾದ ರಾಘವೇಂದ್ರ ಹಾಗೂ ಟಿ.ಎಂ. ಮುರಳಿ ಮಾರ್ಗದರ್ಶನದಲ್ಲಿ ಅರ್ಧ ದಿನ ಶ್ರಮದಾನ ಮಾಡಿ ಕೊಳವನ್ನು ಸ್ವಚ್ಛಗೊಳಿಸಿದರು. ಈ ಕೊಳದ ಸುತ್ತಲೂ ಚುರಕಿ ಗಾರೆಯ ಅವಶೇಷಗಳು ಇದ್ದು, ಕಲ್ಲು ಗೋಡೆಯನ್ನು ನಿರ್ಮಿಸಿರುವುದು ಕಂಡು ಬಂದಿದೆ. ಇದೇ ಶಿಬಿರಾರ್ಥಿಗಳು ಮೂರು ದಿನಗಳ ಹಿಂದೆ ಕರಿಘಟ್ಟದ ಶ್ರೀನಿವಾಸ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 25 ಅಡಿ ಆಳದ ಕೊಳವೊಂದನ್ನು ಪತ್ತೆ ಹಚ್ಚಿ ಅದನ್ನು ಸ್ವಚ್ಛಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.