ADVERTISEMENT

ಕರೀಘಟ್ಟ ಜಾತ್ರೆ ಹಾದಿ ದುರ್ಗಮ: ಭಕ್ತರಿಗಿಲ್ಲ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:35 IST
Last Updated 8 ಮಾರ್ಚ್ 2012, 8:35 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಕರೀಘಟ್ಟ ಶ್ರೀ ವೆಂಕಟರಮಣ ಸ್ವಾಮಿಯ ರಥೋತ್ಸವ ಮಾ.9ರಂದು  ನಡೆಯಲಿದೆ.

  ಈ ರಥೋತ್ಸವದ ಅಂಗವಾಗಿ ನಡೆಯುವ ಜಾತ್ರೆಗೆ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಆದರೆ ಕರೀಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳಾಗಿವೆ. ದಶಕಗಳ ಹಾಕಿದ್ದ ಡಾಂಬರು ಕಿತ್ತಿದೆ. ತಿರುವುಗಳಲ್ಲಿ ಕಲ್ಲುಗಳು ಮೇಲೆದ್ದಿದ್ದು, ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಕಾರು, ಟೆಂಪೋ ಇತರ ವಾಹನಗಳ ಸಂಚಾರಕ್ಕೂ ಕಷ್ಟವಾಗಿದೆ.

ಕರೀಘಟ್ಟ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಎರಡು ಕೋಟಿ ರೂಪಾಯಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಜಾತ್ರೆ ವೇಳೆಗೆ ಹಣ ಬಿಡುಗಡೆ ಆಗುವ ವಿಶ್ವಾಸ ಇತ್ತು. ತಾಂತ್ರಿಕ ಕಾರಣಗಳಿಂದ ಅದು ವಿಳಂಬವಾಗಿದೆ ಎಂದು ಕಂದಾಯ ನಿರೀಕ್ಷಕ ಸಿದ್ದಪ್ಪ ಹೇಳುತ್ತಾರೆ. ಜನ ಪ್ರತಿನಿಧಿಗಳು ಸುಳ್ಳು ಆಶ್ವಾಸನೆ ಕೊಡುತ್ತಲೇ ಬಂದಿದ್ದಾರೆ, ಅಧಿಕಾರಿ ಗಳು ಜಾತ್ರೆ ಸಮಯದಲ್ಲಿ ಇತ್ತ ಬರುತ್ತಾರೆ. ಉಳಿದ ದಿನಗಳಲ್ಲಿ ದೇವಾಲಯದ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ.

ಮುಜರಾಯಿ ಇಲಾಖೆಗೆ ಸೇರಿರುವ ಕರೀಘಟ್ಟ ವೆಂಕಟರಮಣಸ್ವಾಮಿ ದೇವಾಲಯ ಸಂಪರ್ಕ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕು ಎಂದು ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಶಿವರಾಂ, ಕಾಬೂಲ್ ಇತರರು ಒತ್ತಾಯಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.