ADVERTISEMENT

ಕರ ನಿರಾಕರಣೆ ಚಳವಳಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:25 IST
Last Updated 3 ಅಕ್ಟೋಬರ್ 2012, 5:25 IST

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿಗೆ 19ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದು, ಇಂದಿನಿಂದಲೇ ಕರ ನಿರಾಕರಣೆ ಚಳವಳಿ ಆರಂಭಿಸಲಾಗುವುದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಒದಗಿಸಿಕೊಡಲು ಮಹಾತ್ಮಾಗಾಂಧೀಜಿಯವರು ಇಂತಹ ಚಳವಳಿ ನಡೆಸಿದ್ದರು. ಅವರ ಜಯಂತಿ ದಿನದಿಂದಲೇ ಅವರ ಮಾರ್ಗದರ್ಶನದಂತೆ ತೆರಿಗೆ ನಿರಾಕರಿಸುವ ಮೂಲಕ ಅಸಹಕಾರ ಚಳವಳಿ ನಡೆಸಲಾಗತ್ತಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಆದಾಯ, ಮನರಂಜನಾ, ಮಾರಾಟ ತೆರಿಗೆ, ಮನೆ, ನೀರಿನ ಕಂದಾಯ ಸೇರಿದಂತೆ ಯಾವುದೇ ತೆರಿಗೆಯನ್ನು ಪಾವತಿಸಬಾರದು. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಹಾಗೂ ಖಾಸಗಿ ಕಚೇರಿ ನೌಕರರು ಲೇಖನಿಯನ್ನು ಸ್ಥಗಿತಗೊಳಿಸಿ, ರೈತರ ಹೋರಾಟಕ್ಕೆ ಸಹಕರಿಸಬೇಕು. ಪ್ರತಿ ಮನೆಯಿಂದ ಒಬ್ಬರು ಕೆಆರ್‌ಎಸ್ ಚಲೋ ಚಳವಳಿಯಲ್ಲಿ ಭಾಗವಹಿಸಬೇಕು.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ವರ್ತಕರು, ಕಾರ್ಮಿಕರೂ ಸೇರಿದಂತೆ ಎಲ್ಲರೂ ಭಾಗಿಗಳಾಗಬೇಕು ಎಂದು ಅವರು ಮನವಿ ಮಾಡಿದರು. ಮಾಜಿ ಸಚಿವ ಎಂ.ಎಸ್. ಆತಾನಂದ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ,   ಎನ್.ರಾಜು, ಎಂ.ಬಿ. ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.