ADVERTISEMENT

ಕಾರ್ಮಿಕ ಸಾವು: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 5:55 IST
Last Updated 3 ಸೆಪ್ಟೆಂಬರ್ 2013, 5:55 IST

ಕೃಷ್ಣರಾಜಪೇಟೆ: ತೆಂಗಿನಮರದಿಂದ ಕಾಯಿ ಕೀಳುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ತೋಟದ ಮಾಲೀಕನಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮಸ್ಥರು ಇಲ್ಲಿನ ಪೊಲೀಸ್ ಠಾಣೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದದರು.

ಚೌಡೇನಹಳ್ಳಿ ಗ್ರಾಮದ ಸುಬ್ಬೇಗೌಡ ಎಂಬುವವರ ತೋಟದಲ್ಲಿ ತೆಂಗಿನ ಕಾಯಿ ಕೀಳುವ ಕೆಲಸಕ್ಕೆ ಅದೇ ಗ್ರಾಮದ ಪ್ರೇಂಕುಮಾರ್ (45) ಆಗಸ್ಟ್ 28ರಂದು ಹೋಗಿದ್ದರು. ಆ ಸಂದರ್ಭದಲ್ಲಿ ಆಯತಪ್ಪಿ ಮರದ ಮೇಲಿನಿಂದ ಬಿದ್ದ ಆತನ ಸೊಂಟ ಮತ್ತು ತಲೆಗೆ ತೀವ್ರವಾದ ಪೆಟ್ಟುಬಿದ್ದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪ್ರೇಂಕುಮಾರ್ ಸೋಮವಾರ ಮೃತಪಟ್ಟಿದ್ದಾರೆ.

ಆದರೆ, ತೋಟದ ಮಾಲೀಕರು ಇದೂವರೆಗೆ ಘಟನೆಗೆ ಕಿಂಚಿತ್ತೂ ಸ್ಪಂದಿಸಿಲ್ಲ. ಆಸ್ಪತ್ರೆ, ಚಿಕಿತ್ಸೆ ಮತ್ತಿತರ ಅಗತ್ಯ ಸಂದರ್ಭಗಳಲ್ಲೂ ತಲೆ ಹಾಕಿಲ್ಲ. ಕನಿಷ್ಠ ಮಾನವೀಯತೆಯನ್ನೂ ಮರೆತು ಘಟನೆಗೂ ತನಗೂ ಸಂಬಂಧ ಇಲ್ಲವೆಂಬಂತೆ ಅವರು ಇದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಮೃತ ಕಾರ್ಮಿಕ ಬಡವನಾಗಿದ್ದು, ಘಟನೆಯಿಂದ ಆತನ ಕುಟುಂಬ ಅನಾಥವಾಗಿದೆ. ಪೊಲೀಸರು ತೋಟದ ಮಾಲೀಕನಿಂದ ಪರಿಹಾರ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೃತ ಕಾರ್ಮಿಕನ ಪತ್ನಿ ಶಶಿಕಲಾ, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮಹೇಂದ್ರ, ಮುಖಂಡರಾದ ಬಸ್ತಿ ರಂಗಪ್ಪ, ಎಂ.ಸಿ. ಸಣ್ಣಯ್ಯ, ಚೆಲುವರಾಜು ಮತ್ತಿತರರ ನೇತೃತ್ವದಲ್ಲಿ ಚೌಡೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.