ಮಂಡ್ಯ: ನಗರದ ಮಟ್ಟಿಗೆ ಗ್ರಾಹಕರಿಗೆ `ಗ್ಯಾಸ್ ಟ್ರಬಲ್~ನಿಂದ ಸದ್ಯಕ್ಕೆ ಪರಿಹಾರ ಸಿಗುವ ಸೂಚನೆಗಳು ಕಾಣುತ್ತಿಲ್ಲ. ಈಚೆಗೆ ನಡೆದ ಅಡುಗೆ ಅನಿಲ ಸಿಲಿಂಡರ್‌ಗಳ ಸಾಗಣೆದಾರರ ಮುಷ್ಕರ ಅಂತ್ಯಗೊಂಡು ವಾರವೇ ಕಳೆದರೂ ಇಲ್ಲಿ ಸಿಲಿಂಡರ್‌ಗಾಗಿ ದಿನಗಟ್ಟಲೆ ಕಾಯುವುದು ತಪ್ಪಿಲ್ಲ.
ನಗರದ ನೂರಡಿ ರಸ್ತೆಯಲ್ಲಿನ ಅಡುಗೆ ಅನಿಲ ವಿತರಕರ ಕಚೇರಿ ಬಳಿ ಸಾಲು ಗಟ್ಟಿದ ಬೈಕ್‌ಗಳು, ಜನರ ಸಾಲು, ಖಾಲಿ ಸಿಲಿಂಡರ್‌ಗಳ ಪ್ರದರ್ಶನ ಸಾಮಾನ್ಯ. ಅದು, ಸಮಸ್ಯೆಗಳ ಆಗರ. ವಾರದ ರಜೆಯೂ ಈ ಗ್ರಾಹಕರ ಪಾಲಿಗೆ ಸಜೆಯೇ.
ಬೆಳ್ಳಂ ಬೆಳಿಗ್ಗೆಯೇ ಆಗಮಿಸಿ ಖಾಲಿ ಸಿಲಿಂಡರ್‌ಗಳ ಜೊತೆಗೆ ಸಾಲುಗಟ್ಟಿದರೂ ಭರ್ತಿ ಸಿಲಿಂಡರ್ ಸಿಗುವ ಖಾತರಿಯಿಲ್ಲ. ಆದರೆ, ಸಿಲಿಂಡರ್ ವಿತರಣೆಯನ್ನು ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳಬೇಕಾದ ವಿತರಕ ಸಂಸ್ಥೆಯಾಗಲಿ, ಇಂಥ ಅವ್ಯವಸ್ಥೆ ಆದಾಗ ಗಮನಹರಿಸಬೇಕಾದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯಾಗಲಿ ಇತ್ತ ಗಮನವನ್ನೇ ಹರಿಸಿಲ್ಲ.
ಹೆಚ್ಚು ಕಡಿಮೆ ವರ್ಷದಿಂದಲೂ ಇಲ್ಲಿ ಇದೇ ಚಿತ್ರಣ. ಭಾನುವಾರ ಸಾಲು ಸ್ವಲ್ಪ ದೊಡ್ಡದಿತ್ತು. ಜನರ ಕೋಪವೂ ದೊಡ್ಡದಿತ್ತು. ಪಡಿತರ ವಿತರಣೆ, ಸಿಲಿಂಡರ್ ವಿತರಣೆ ವ್ಯವಸ್ಥೆ ಸರಿಪಡಿಸುವ ಗುರಿ ಹೊಂದಿದ್ದ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಆಡಳಿತದ ವಿರುದ್ಧ ಜನರ ಆಕ್ರೋಶ ತಿರುಗಿತ್ತು. ನಾಲ್ಕೈದು ದಿನದಿಂದ ಬರುತ್ತಿದ್ದೇವೆ. ಸಿಲಿಂಡರ್ ಸಿಗುತ್ತಿಲ್ಲ. ಇಂದೇ ಸಿಗುತ್ತದೆ ಎಂಬ ಖಾತರಿಯೂ ಇಲ್ಲ. ಬೆಳಿಗ್ಗೆ ಬಂದು ಕಾಯುವುದೇ ಆಗಿದೆ ಎಂಬುದು ಅರವಿಂದ ಅವರ ಪ್ರತಿಕ್ರಿಯೆ.
ಕೇಳಿದರೆ ಸ್ಟಾಕ್ ಬಂದಿಲ್ಲ ಎಂಬ ಉತ್ತರ ದೊರೆಯುತ್ತಿದೆ. ನಿಯಮದ ಪ್ರಕಾರ, ಆದ್ಯತೆ ಮೇಲೆ ನಿಗದಿತ ಕಾಲಾವಧಿಯಲ್ಲಿ ಸಿಲಿಂಡರ್ ಪೂರೈಸಬೇಕು. ಆದರೆ, ನಿಯಮಗಳಿಗೆ ಅರ್ಥವೇ ಇಲ್ಲ. ಒಂದು ಕಡೆ ಕರೆಂಟ್ ಇರುವುದಿಲ್ಲ; ಇನ್ನೊಂದು ಕಡೆ ಎಲ್‌ಪಿಜಿ ಕೂಡಾ ಖಾಲಿಯಾದರೆ ಏನು ಮಾಡಬೇಕು ಎಂಬುದು ತಿಮ್ಮೇಗೌಡರ ಅಸಮಾಧಾನ.
ವಿತರಣೆ ಹೊಣೆ ಹೊತ್ತಿರುವ ಸಂಸ್ಥೆಯಾಗಲಿ ಅಥವಾ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳಾಗಲೀ ಮಧ್ಯ ಪ್ರವೇಶಿಸಿ ಅಡುಗೆ ಅನಿಲ ಸಿಲಿಂಡರ್ ವಿತರಣೆ ಅವ್ಯವಸ್ಥೆ ಸರಿಪಡಿಸುವ, ನಿರ್ದಿಷ್ಟ ದಿನಾಂಕದಲ್ಲಿ ಸಿಲಿಂಡರ್ ಲಭ್ಯವಾಗುವ ಖಾತರಿಯನ್ನು ಗ್ರಾಹಕರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಆಗಾಗ್ಗೆ ನಡೆಯುವ ಕುಂದುಕೊರತೆ ಆಲಿಕೆ ಸಭೆಯಲ್ಲಿ `ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ~ ಎಚ್ಚರಿಕೆಯ ಮಾತನಾಡುವ ಅಧಿಕಾರಿಗಳು, ಇಲ್ಲಿ ಅನಿವಾರ್ಯ ಎಂಬಂತೆ ಅನುಭವಿಸುತ್ತಿರುವ ಗ್ರಾಹಕರ ಸಮಸ್ಯೆ ಬಗೆಹರಿಸಲು ಮುಂದಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.