ADVERTISEMENT

ಚಿತ್ರಮಂದಿರಕ್ಕೆ ಮೂಲಸೌಕರ್ಯ ಕಲ್ಪಿಸಲು ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 7:19 IST
Last Updated 5 ಏಪ್ರಿಲ್ 2013, 7:19 IST

ಮದ್ದೂರು: ಪಟ್ಟಣದ ಸಂಜಯ ಚಿತ್ರಮಂದಿರದಲ್ಲಿನ ಮೂಲ ಸೌಕರ್ಯಗಳ ಕೊರತೆ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬುಧವಾರ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.

ಚಿತ್ರಮಂದಿರದ ಮಾಲೀಕರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಅವರು, ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಈ ಹಿಂದೆ ಸುಸಜ್ಜಿತವಾಗಿದ್ದ ಸಂಜಯ ಚಿತ್ರಮಂದಿರ ಇದೀಗ ಅಶುಚಿತ್ವದಿಂದ ಕೂಡಿದ್ದು, ಕುಳಿತು ಚಿತ್ರವನ್ನು ನೋಡಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಚಿತ್ರಮಂದಿರದ ಒಳಗಿನ ಆಸನಗಳು ಮುರಿದಿವೆ. ಫ್ಯಾನುಗಳು ಕೆಟ್ಟಿವೆ. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಶೌಚಾಲಯ ವ್ಯವಸ್ಥೆ ಸರಿಯಿಲ್ಲ.

ದುಬಾರಿ ಪ್ರವೇಶ ದರ ಪಡೆಯುವ ಚಿತ್ರಮಂದಿರದ ಮಾಲೀಕರು ಈ ಕೂಡಲೇ ಎಚ್ಚೆತ್ತು ಇನ್ನೊಂದು ವಾರದೊಳಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಇಲ್ಲದಿದ್ದಲ್ಲಿ ಚಿತ್ರಮಂದಿರವನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ರೈತಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಉಮೇಶ್, ಶ್ರೀನಿವಾಸ್, ಸಿದ್ದೇಗೌಡ, ಮಂಜು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.