ADVERTISEMENT

ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 7:40 IST
Last Updated 10 ಅಕ್ಟೋಬರ್ 2012, 7:40 IST

ಮಂಡ್ಯ: ಜಿಲ್ಲಾ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಅ.10 ರಂದು ನಡೆಯಲಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಲು ಬಹುಮತ ಹೊಂದಿರುವ ಜೆಡಿಎಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಪೈಪೋಟಿ ಹೆಚ್ಚಾಗಿದ್ದು, ಆಯ್ಕೆಯು ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.
ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರಲ್ಲಿ ಜೆಡಿಎಸ್‌ನ 24, ಕಾಂಗ್ರೆಸ್‌ನ 14 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಭಾರತಿ ಕೃಷ್ಣಮೂರ್ತಿ, ಚಿನಕುರಳಿ ಕ್ಷೇತ್ರದ ಮಂಜುಳಾ ಪರಮೇಶ್, ಮಹದೇವಪುರದ ನಾಗರತ್ನ ಬಸವರಾಜು, ಸುಜಾತಾ ನಾಗೇಂದ್ರ, ಕೋಮಲಾಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ದುದ್ದ ಕ್ಷೇತ್ರದ ಡಾ. ಶಂಕರೇಗೌಡ, ಕೆ.ಎಸ್. ಪ್ರಭಾಕರ್, ಕೆ.ಎಸ್. ವಿಜಯಾನಂದ, ಸಿ.ಎಂ. ಸತೀಶ್, ಬಿ.ಟಿ. ಶ್ರೀನಿವಾಸ್, ವಿ. ಮಂಜೇಗೌಡ, ಸಿ.ಮಾದಪ್ಪ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ನಾಗಮಂಗಲ ಮದ್ದೂರು ಹಾಗೂ ಕೆ.ಆರ್. ಪೇಟೆ  ತಾಲ್ಲೂಕುಗಳಿಗೆ ನೀಡಿರುವುದರಿಂದ, ಬೇರೆ ತಾಲ್ಲೂಕಿನವರಿಗೆ ಅವಕಾಶ ನೀಡಬೇಕು ಎಂಬ ಲೆಕ್ಕಾಚಾರ ನಡೆದಿದೆ. ಉಪಾಧ್ಯಕ್ಷ ಸ್ಥಾನದಲ್ಲಿಯೂ ಈ ಮಾನದಂಡ ಅನ್ವಯಯವಾಗುವ ಸಾಧ್ಯತೆಗಳಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಕೆಲವರು ಮೊದಲ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವುದರಿಂದ ಅವಕಾಶ ಕಡಿಮೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಷ್ಟರ ಹೊರತಾಗಿಯೂ ಉಪಾಧ್ಯಕ್ಷ ಸ್ಥಾನದ ಪೈಪೋಟಿ ತೀವ್ರವಾಗಿದೆ.

ಮೊದಲ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಾಂಡವಪುರ ಹಾಗೂ ಶ್ರೀರಂಪಟ್ಟಣ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕುಗಳಿಗೆ ಅವಕಾಶ ಸಿಕ್ಕಿದೆ. ಇದೇ ಅಂಶ ಕೆಲಸ ಮಾಡಿದರೆ, ಈ ತಾಲ್ಲೂಕಿನ ಅಭ್ಯರ್ಥಿಗಳೇ ಅಧ್ಯಕ್ಷ ಹಾಗೈ ಉಪಾಧ್ಯಕ್ಷರಾಗಲಿದ್ದಾರೆ.

ಮಾಜಿ ಸಚಿವ ಕೆ.ವಿ. ಶಂಕರೇಗೌಡರ ಮೊಮ್ಮಗ ಎಂಬುದು ಪರಿಗಣನೆಗೆ ಬಂದರೆ ಕೆ.ಎಸ್. ವಿಜಯಾನಂದ, ಕೃಷ್ಣ ಅವರು ಕೃಪಾಕಟಾಕಷ್ಟ ತೋರಿದರೆ ಪ್ರಭಾಕರ್ ಅವರಿಗೆ ಅದೃಷ್ಟ ಒಲಿಯಬಹುದು. ಇಲ್ಲದಿದ್ದರೆ ಅಧಿಕಾರ ಹಂಚಿಕೆ ಸೂತ್ರದಲ್ಲಿ ಅವಕಾಶ ಸಿಗಬಹುದು. ಇಷ್ಟೆಲ್ಲ ಲೆಕ್ಕಾಚಾರದ ನಂತರವೂ, ಅ.10 ರಂದು ಬೆಳಿಗ್ಗೆ 10 ಗಂಟೆಗೆ ಜೆಡಿಎಸ್ ನಾಯಕರು ಸಭೆ ನಡೆಯಲಿದೆ. ಅಲ್ಲಿ ಅಭ್ಯರ್ಥಿಗಳು ಯಾರು ಎಂಬುದು ತೀರ್ಮಾನವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.