
ಪಾಂಡವಪುರ: ತಾಲ್ಲೂಕಿನ ತಿರುಮಲಾ ಪುರ ಗ್ರಾಮದಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಿಸಲಾಗಿರುವ ಕೊಳವೆ ನೀರು ಸರಬರಾಜು ಯೋಜನೆಯಡಿ ಓವರ್ ಹೆಡ್‌ಟ್ಯಾಂಕ್ ನಿರ್ಮಿಸಿದ್ದರೂ, ಇಲ್ಲಿಯವರೆಗೆ ಗ್ರಾಮದ ಜನರಿಗೆ ಒಂದು ಹನಿ ನೀರು ಕೂಡ ದಕ್ಕಿಲ್ಲ.
ಟಿ.ಎಸ್. ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ತಿರುಮಲಾಪುರ ಗ್ರಾಮದಲ್ಲಿ ಒಂದು ಸಾವಿರದಷ್ಟು ಜನಸಂಖ್ಯೆ ಇದೆ. ಪ್ರವಾಸಿ ತಾಣ ತೊಣ್ಣೂರು ಕೆರೆಯ ಹಿನ್ನೀರಿನ ದಡದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.
2011–12ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₨ 20ಲಕ್ಷ ವೆಚ್ಚ ಮಾಡಿ ಊರಿನ ಹೊರಭಾಗದಲ್ಲಿ ಕೊಳವೆಬಾವಿ, ಒವರ್ ಹೆಡ್ ಟ್ಯಾಂಕ್ ಹಾಗೂ ಗ್ರಾಮದ ಬೀದಿಗಳಿಗೆ ಪೈಪ್‌ಲೈನ್ ಸಹ ಹಾಕಲಾಗಿತ್ತು.
ಕೆಲವು ದಿನಗಳ ನಂತರ ನೀರಿನ ಪೂರೈಕೆಗಾಗಿ ಕೊಳವೆಬಾವಿ ನೀರಿನ ಮಟ್ಟ ಕುಸಿಯಿತು ಎಂದು ನೀರು ಪೂರೈಸಲೇ ಇಲ್ಲ. ಗ್ರಾಮ ಪಂಚಾಯಿತಿಯೂ ನಿರ್ಲಕ್ಷ್ಯ ವಹಿಸಿತು. ಹಾಗಾಗಿ ಸರ್ಕಾರದ ಲಕ್ಷಾಂತರ ರೂಪಾಯಿ ಮಣ್ಣು ಪಾಲಾಗಿದೆ.
ಕುಡಿಯುವ ನೀರು ದೊರಕಿಸಿಕೊಡುವ ದೃಷ್ಟಿಯಿಂದ ಗ್ರಾಮ ದೊಳಗಡೆ ಕೊಳವೆಬಾವಿ ಕೊರೆಯಿಸಿ ನೀರಿನ ತೊಂಬೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಯಾದರೂ, ಸಮಪರ್ಕವಾಗಿ ನೀರು ಸರಬರಾಜಾ ಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್ ಬಳಿಯ ಹೊಸ ಬಡಾವಣೆಯಲ್ಲಿ ವಾಸಿಸುತ್ತಿರುವ 15 ಕುಟುಂಬಗಳು ಇಂದಿಗೂ ನೀರಿಗಾಗಿ ಪರದಾಡುತ್ತಿದ್ದಾರೆ.
‘ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಯೋಜನೆಯಿಂದ ನಯಾ ಪೈಸೆಯಷ್ಟು ಉಪಯೋಗವಾಗಿಲ್ಲ ಎಂದು ದೂರುತ್ತಾರೆ ಗ್ರಾಮದ ಕರಿಗಿರೀಗೌಡ.
‘ಹೊಸದಾಗಿ ಕೊಳವೆಬಾವಿ ಕೊರೆಯಿಸಿ ರೈಸಿಂಗ್ ಪೈಪ್‌ಲೈನ್ ಹಾಕಬೇಕಾಗಿರುತ್ತದೆ. ಜತೆಗೆ ನೀರನ್ನು ಟ್ಯಾಂಕಿಗೆ ಪಂಪ್ ಮಾಡಬೇಕಿದೆ. ಅದಕ್ಕಾಗಿ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಎಂಜಿನಿಯರ್ ಸುನೀಲ್‌ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.