ನಾಗಮಂಗಲ: ಟ್ಯಾಂಕ್ ನಿರ್ಮಿಸಿ ಎರಡು ವರ್ಷ ಕಳೆದಿದೆ. ಆದರೆ, ಅದಕ್ಕೆ ಒಮ್ಮೆಯೂ ನೀರು ಪೂರೈಸಿಲ್ಲ. ನೀರು ಪೂರೈಸದಿದ್ದರೆ, ಟ್ಯಾಂಕ್ ನಿರ್ಮಿಸಿದ್ದೇಕೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.
ತಾಲ್ಲೂಕಿನ ಹೊಣಕೆರೆ ಹೋಬಳಿಯ ಬಿ. ಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ 2 ವರ್ಷಗಳ ಹಿಂದೆ ₨ 15 ಲಕ್ಷ ವೆಚ್ಚದಲ್ಲಿ ಮೇಜರ್ ಟ್ಯಾಂಕ್ ನಿರ್ಮಾಣಗೊಂಡಿದೆ.
ಟ್ಯಾಂಕ್ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಒಂದು ಹನಿ ನೀರು ತುಂಬಿಸಿಲ್ಲ. ಟ್ಯಾಂಕ್ ಕಟ್ಟಿಸಿದ ಅಧಿಕಾರಿಗಳು ಟ್ಯಾಂಕಿನಿಂದ ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ಲೈಲ್ ಕಾಮಗಾರಿ ಮಾಡಲಿಲ್ಲ. ಹಾಗಾಗಿ ಟ್ಯಾಂಕ್ ನಿರರ್ಥಕವಾಗಿದೆ.
ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಿಸಿದೆ. ನೀರು ಸಂಗ್ರಹಿಸಿದ್ದರಿಂದ ಅಲ್ಲಲ್ಲಿ ಹಾಳಾದಂತೆ ಕಂಡು ಬರುತ್ತಿದೆ. ಟ್ಯಾಂಕ್‌ಗೆ ಅರ್ಧ ಕಿ.ಮೀ. ದೂರದಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ. ಅದನ್ನೂ ಉಪಯೋಗಿಸದಿರುವುದರಿಂದ ನಿಷ್ಪಯೋಜಕವಾಗಿದೆ. ಮಣ್ಣು ಬಿದ್ದು ಕೊಳವೆಬಾವಿ ಹಾಳಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಪ್ರಸ್ತುತ ಗ್ರಾಮಕ್ಕೆ ತೊಂಬೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಲ್ಲದ್ದರಿಂದ ಟ್ಯಾಂಕ್ ಕಟ್ಟಿಸಿ, ಕೊಳವೆಬಾವಿ ಮೂಲಕ ನೀರು ಪೂರೈಸಲು ಯೋಜಿಸ ಲಾಗಿತ್ತು. ತೊಂಬೆಗಳ ಶುಚಿತ್ವ ಕಾಪಾಡದ್ದರಿಂದ ಕೆಲವೊಮ್ಮೆ ಕಲ್ಮಷ ನೀರೂ ಪೂರೈಕೆಯಾಗುತ್ತದೆ ಎಂದು ದೂರುತ್ತಾರೆ ಗ್ರಾಮಸ್ಥರು. ಕೆಲವರು ನಾಗಮಂಗಲದಿಂದ ಹಣ ತೆತ್ತು ಫಿಲ್ಟರ್ ಮಾಡಿದ ನೀರನ್ನು ತರಿಸಿಕೊಳ್ಳುತ್ತಿದ್ದಾರೆ.
ಸಧ್ಯಕ್ಕೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕ್ ನಿರ್ಮಿಸಿದ ನಿರ್ಮಿತಿ ಕೇಂದ್ರದವರು ಮಾಹಿತಿ ನೀಡದ ಹೊರತು ನಾವು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹಣದ ಕೊರತೆಯಿಂದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎನ್ನುತ್ತಾರೆ ಬ್ರಹ್ಮದೇವರ ಹಳ್ಳಿ ಪಂಚಾಯಿತಿ ಪಿಡಿಒ ಶ್ರೀಕಂಠ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.