ADVERTISEMENT

`ದೇಸಿ ಉತ್ಪನ್ನ ಬಳಕೆಯೇ ಆರ್ಥಿಕ ಅಸ್ಥಿರತೆಗೆ ಪರಿಹಾರ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:45 IST
Last Updated 5 ಸೆಪ್ಟೆಂಬರ್ 2013, 8:45 IST

ಮಂಡ್ಯ: ದೇಶದಲ್ಲಿನ ಆರ್ಥಿಕ ಅಸ್ಥಿರತೆಗೆ ಪರಿಹಾರ ಕಂಡುಕೊಳ್ಳಲು ಕನಿಷ್ಠ ಮುಂದಿನ ಕೆಲ ವರ್ಷಗಳ ಕಾಲ ದೇಸಿ ಉತ್ಪನ್ನಗಳನ್ನೇ ಬಳಸುವ ನಿರ್ಧಾರವನ್ನು ನಾವು ಮಾಡಬೇಕಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ. ಬಲವೀರರೆಡ್ಡಿ ಸಲಹೆ ನೀಡಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಕಾಲೇಜಿನ ನಾಲ್ಕನೇ ವರ್ಷದ ಪದವಿ ಹಾಗೂ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡುವ ಸಮಾರಂಭದಲ್ಲಿ ಅವರು  ಪ್ರಧಾನ ಭಾಷಣ ಮಾಡಿದರು.

ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ಅಗತ್ಯ ಉತ್ಪನ್ನಗಳ ಬೆಲೆ ದಿನೇದಿನೇ ಗಣನೀಯವಾಗಿ ಏರುತ್ತಿದೆ. ಭಾರತದ ಆರ್ಥಿಕ ಸ್ಥಿತಿ ಸದ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಇಟ್ಟಂತೆ ಆಗಿದೆ. ಇಂತಹ ಸಂದರ್ಭದಲ್ಲಿ ದೇವರೇ ನಮ್ಮನ್ನು ಕಾಪಾಡಬೇಕಿದೆ ಎಂದರು.

ದೇಸಿ ಉತ್ಪನ್ನಗಳನ್ನು ಬಳಸದಿದ್ದರೆ ಮುಂದಿನ ದಿನಗಳಲ್ಲಿ ರೂಪಾಯಿ ಅಪಮೌಲ್ಯಗೊಳ್ಳಲಿದ್ದು, ಮತ್ತಷ್ಟು ಕೆಳಕ್ಕೆ ಕುಸಿಯುವ ಸಾಧ್ಯತೆ ನಿಚ್ಚಳವಾಗಿದೆ. ಭವಿಷ್ಯದಲ್ಲಿ ಸಾಮಾನ್ಯ ಉತ್ಪನ್ನಗಳನ್ನು ಕೊಳ್ಳಲು ಹೆಚ್ಚಿನ ಹಣ ಪಾವತಿ ಮಾಡಬೇಕಾದ ಕೆಟ್ಟ ದಿನಗಳು ಎದುರಾಗಲಿದೆ ಎಂದು ಎಚ್ಚರಿಸಿದರು.

ಏಷ್ಯಾದ ಹಲವು ರಾಷ್ಟ್ರಗಳೂ ಕೂಡ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಪ್ರಸ್ತುತ ಭಾರತದ ಆರ್ಥಿಕ ಸ್ಥಿತಿ ತೀರಾ ಕುಸಿತ ಕಂಡಿದೆ. ಕೆಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗಾಗಲೇ ಮುಚ್ಚಿವೆ ಅಥವಾ ಮುಚ್ಚುವ ಹಂತಕ್ಕೆ ತಲುಪಿವೆ ಎಂದು ತಿಳಿಸಿದರು.
ಆರ್ಥಿಕ ಅಸ್ಥಿರತೆಯ ಏರಿಳಿತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ, ತೀರಾ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವಿವಿಧ ಉತ್ಪನ್ನಗಳ ವಿದೇಶಿ ವಿನಿಮಯ ಕಾರಣದಿಂದಾಗಿ ದೇಶವನ್ನು ಬಿಟ್ಟು ಹೋಗುತ್ತಿದೆ ಎಂದರು.

ಇನ್ಫೋಟೆಕ್, ಬಯೋಟೆಕ್, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಕಮ್ಯೂನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮೆಕಾನಿಕಲ್ ಸೇರಿದಂತೆ ಇನ್ನಿತರ ಮೆಗಾ ಟೆಕ್ನೋ ವಾಣಿಜ್ಯೋದ್ಯಮ ಪ್ರವೃತ್ತಿಗಳು ಮುಂದಿನ ದಿನಗಳಲ್ಲಿ ದೇಶವನ್ನು ಸಂರಕ್ಷಿಸಲಿವೆ ಎಂದು ತಿಳಿಸಿದರು.

ಪಿಇಟಿ ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ, ಕಾರ್ಯದರ್ಶಿ ಎಚ್. ಹೊನಪ್ಪ, ಬಾಷ್- ರೆಕ್ಸ್ರೋಥ್ ಇಂಡಿಯಾ ಲಿಮಿಟೆಡ್ ಡ್ರೈವ್ ಮತ್ತು ಕಂಟ್ರೋಲ್ ಅಕಾಡೆಮಿ ಉಪಾಧ್ಯಕ್ಷ ರಾಜ್‌ಕುಮಾರ್, ಕಾಲೇಜಿನ ಡೀನ್ ಡಾ. ಕೆ.ಎನ್. ಉಮೇಶ್, ಪ್ರಾಂಶುಪಾಲ ಡಾ.ವಿ. ಶ್ರೀಧರ್, ಕಾಲೇಜಿನ ಪರೀಕ್ಷಾ ನಿಯಂತ್ರಕ ಡಾ.ಬಿ. ರಾಮಕೃಷ್ಣ ಮೊದಲಾದವರು ಇದ್ದರು.

ದತ್ತಿ ಬಹುಮಾನ ವಿತರಣೆ
ಮಂಡ್ಯ:
ಇಲ್ಲಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ವಿವಿಧ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಏಳು ವಿದ್ಯಾರ್ಥಿಗಳಿಗೆ ಡಾ.ಎಚ್.ಡಿ. ಚೌಡಯ್ಯ ಹೆಸರಿನ ಮೆರಿಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವರ ಇಂತಿದೆ. ಬಿ.ಎನ್. ಶ್ರೀರಾಜ್ (ಎಂ.ಟೆಕ್ -ಕಂಪ್ಯೂಟರ್ ಇಂಟಿಗ್ರೇಟೆಡ್ ಮ್ಯಾನ್ಯುಫ್ಯಾಕ್ಚರಿಂಗ್), ಎನ್. ದರ್ಶನ್ (ಎಂ.ಟೆಕ್. ಕ್ಯಾಡ್ ಆಫ್ ಸ್ಟ್ರಕ್ಚರ್ಸ್‌), ಕೆ.ಸಿ. ಮಾನಸ ಮತ್ತು ಪಿ. ವಿಜಯ್‌ಕುಮಾರ್ (ಎಂ.ಟೆಕ್ -ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್), ಎಂ.ಕೆ. ಚಾಂದಿನಿ (ಎಂ.ಟೆಕ್ ಎನ್ವಿರಾನಮೆಂಟಲ್ ಎಂಜಿನಿಯರಿಂಗ್), ಪಿ.ಕೆ. ರಶದ್ (ಎಂಬಿಎ), ಕೆ.ಪಿ. ಜೀವನ್ ರಾಜ್ (ಎಂಸಿಎ).

ಬಿ.ಇ. ಪದವಿಯ ವಿವಿಧ ವಿಭಾಗಗಳಲ್ಲಿ ಗರಿಷ್ಠ ಅಂಕ ಗಳಿಸಿ, ದತ್ತಿ ಪದಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳ ವಿವರ ಇಂತಿದೆ. ಎಚ್.ಎಂ. ಗುರುದತ್ತ (ಮೆಕಾನಿಕಲ್ ಎಂಜಿನಿಯರಿಂಗ್), ಎಂ. ಪರಮೇಶ್ವರ ಮಲ್ಯ (ಆಟೋಮೊಬೈಲ್), ಪಿ. ಶಿಲ್ಪಾ (ಸಿವಿಲ್), ಬಿ.ಎಸ್. ವೈಶಾಕ್ (ಕಂಪ್ಯೂಟರ್ ಸೈನ್ಸ್), ವಿ. ದೊಡ್ಡಸ್ವಾಮಿ (ಇಂಡಸ್ಟ್ರಿಯಲ್ ಪ್ರೊಡಕ್ಷನ್), ತ್ರಿಶಲಾ ಕೆ. ಮೆಹ್ತಾ (ಇನ್‌ಫರ್ಮೆಷನ್ ಸೈನ್ಸ್), ಎಸ್. ರಜನಿ (ಎಲೆಕ್ಟ್ರಿಕಲ್), ಕೆ.ಎಸ್.ಚೈತ್ರಾ (ಎನ್ವಿರಾನಮೆಂಟಲ್), ಎಂ.ಎ. ಮನೋಜ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.