ADVERTISEMENT

ನಾಲೆ ಕಾಮಗಾರಿ: ರೈತರಿಗೆ ಮಾಹಿತಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:35 IST
Last Updated 5 ಡಿಸೆಂಬರ್ 2012, 6:35 IST

ಶ್ರೀರಂಗಪಟ್ಟಣ: ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ವಿಶ್ವೇಶ್ವರಯ್ಯ, ವಿರಿಜಾ ಹಾಗೂ ದೇವರಾಯ ನಾಲೆಗಳ ಆಧುನೀಕರಣ ಕಾಮಗಾರಿ ಆರಂಭವಾಗುವ ಹಾಗೂ ನಾಲೆಗಳಲ್ಲಿ ನೀರು ನಿಲುಗಡೆ ಮಾಡುವ ದಿನಾಂಕವನ್ನು ರೈತರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ರೈತರು ಮಂಗಳವಾರ ಅಧಿಕಾರಿಗಳನ್ನು ಒತ್ತಾಯಿಸಿದರು.

ಕೆಆರ್‌ಎಸ್‌ನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿಗೆ ತೆರಳಿದ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಅವರ ಜತೆ ಮುಖಂಡ ಕೆ.ಎಸ್.ನಂಜುಂಡೇಗೌಡ ಇತರರು ಚರ್ಚೆ ನಡೆಸಿದರು. ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ರೈತರು ಕಬ್ಬು ಬೆಳೆದಿದ್ದಾರೆ. 6 ತಿಂಗಳ ಮೊದಲೇ ರೈತರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ. ರೈತರು ಆತಂಕದಲ್ಲಿದ್ದು ಬೆಳೆದು ನಿಂತಿರುವ ಬೆಳೆ ಉಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಗಂಭೀರ ಪ್ರಯತ್ನ ನಡೆಸಬೇಕು. ರೈತರಿಗೆ ಮುನ್ಸೂಚನೆ ನೀಡದೆ ನಾಲೆಗಳಲ್ಲಿ ನೀರು ನಿಲ್ಲಿಸುವುದು ಸರಿಯಲ್ಲ. ಮಾಹಿತಿ ನೀಡದೆ ನೀರು ನಿಲ್ಲಿಸಿದರೆ ರೈತರು ನಷ್ಟ ಅನುಭವಿಸುತ್ತಾರೆ. ಹಾಗಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಲೆಗಳಲ್ಲಿ ನೀರು ನಿಲ್ಲಿಸುವ ಮತ್ತು ಆಧುನೀಕರಣ ಕಾಮಗಾರಿ ಆರಂಭಿಸುವ ಕುರಿತು ಕರಪತ್ರ, ದಿನಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ರೈತರು ಹೇಳಿದರು.

ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿ ಯಾವಾಗ ನೀರು ನಿಲ್ಲಿಸಬೇಕು ಎಂಬುದನ್ನು ಖಚಿತವಾಗಿ ಹೇಳಲಾಗದು. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ನೀರು ನಿಲುಗಡೆ ಕುರಿತು ನಿರ್ಧರಿಸಲಾಗುವುದು. ಜ.15ರಿಂದ ವಿಶ್ವೇಶ್ವರಯ್ಯ, ದೇವರಾಯ ಹಾಗೂ ವಿರಿಜಾ ನಾಲೆ ಕಾಮಗಾರಿ ಶುರು ಮಾಡಲು ಚಿಂತಿಸಲಾಗುತ್ತಿದೆ. ರೂ.330 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ನಾಲೆ, ರೂ.87 ಕೋಟಿ ವೆಚ್ಚದಲ್ಲಿ ವಿರಿಜಾ ಹಾಗೂ ರೂ.19 ಕೋಟಿ ವೆಚ್ಚದಲ್ಲಿ ದೇವರಾಯ ನಾಲೆಗಳು ಆಧುನೀಕರಣಗೊಳ್ಳಲಿವೆ. ವಿರಿಜಾ ನಾಲೆ ಆಧುನೀಕರಣ ಸಂಬಂಧ ಸಚಿವ ಸಂಪುಟದಲ್ಲಿ ಒಪ್ಪಿಗೆ ಸ್ಕಿಕಿದ್ದು, ಸಚಿವಾಲಯದಿಂದ ಇದುವರೆಗೆ ಹಸಿರು ನಿಶಾನೆ ಸಿಕ್ಕಿಲ್ಲ ಎಂದು ವಿಜಯಕುಮಾರ್ ತಿಳಿಸಿದರು.

ನಾಲೆಗಳ ಕಾಮಗಾರಿ ಆರಂಭಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಉನ್ನತ ಅಧಿಕಾರಿಗಳು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ರೈತರಿಗೆ ತಿಳಿಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ಬಿ.ಸಿ.ಕೃಷ್ಣೇಗೌಡ, ಪಾಂಡು, ಪಾ.ಲ.ರಾಮೇಗೌಡ, ಜಯರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.