ADVERTISEMENT

ನೀರು ಸರಬರಾಜಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2013, 5:42 IST
Last Updated 26 ಜೂನ್ 2013, 5:42 IST

ಮದ್ದೂರು: ಪಟ್ಟಣದ ಪೊಲೀಸ್ ಹಾಗೂ ಸರ್ಕಾರಿ ವಸತಿ ಗೃಹಗಳ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಮಂಗಳವಾರ ಅಲ್ಲಿನ ನಿವಾಸಿಗಳು ಪುರಸಭಾ ಕಚೇರಿ ಎದುರು ಖಾಲಿ ಕೊಡ ಪ್ರದರ್ಶನ ನಡೆಸಿ ಪ್ರತಿಭಟಿಸಿದರು.

ಪುರಸಭಾ ಅಧಿಕಾರಿಗಳ ವಿರುದ್ಧ ಘೋಷಣೆ ಮೊಳಗಿಸಿದ ಅವರು, ಅರ್ಧಗಂಟೆಗೂ ಹೆಚ್ಚು ಕಾಲ ಕಚೇರಿ ಎದುರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಒಂದು ತಿಂಗಳಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಕುರಿತು ಪುರಸಭೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ. ಇಲ್ಲಿನ ನಿವಾಸಿಗಳು ದೂರದ ಬೋರ್‌ವೆಲ್‌ಗಳಿಗೆ ತೆರಳಿ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಒದಗಿದೆ ಎಂದು ಕಾಲೋನಿಯ ಮಹಿಳೆಯರು ತಮ್ಮ ಅಳಲು ವ್ಯಕ್ತಪಡಿಸಿದರು.

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪುರಸಭಾ ಎಂಜಿನಿಯರ್ ಪ್ರಸಾದ್ ಅವರನ್ನು ಸುತ್ತುವರಿದ ಮಹಿಳೆಯರು ಅವರ ವಿರುದ್ಧ ಘೋಷಣೆ ಮೊಳಗಿಸಿದರು. ಮಹಿಳೆಯರನ್ನು ಸಮಾಧಾನಗೊಳಿಸಿದ ಪ್ರಸಾದ್ ಅವರು, ವಿದ್ಯುತ್ ಅಭಾವದಿಂದಾಗಿ ಸಮರ್ಪಕ ಕುಡಿಯುವ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಇನ್ನೊಂದು ವಾರದೊಳಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂಬ ಭರವಸೆ ನೀಡಿದಾಗ ಪ್ರತಿಭಟನೆ  ಹಿಂಪಡೆಯಲಾಯಿತು.  ಶಿವಮ್ಮ, ಇಂದ್ರಮ್ಮ, ಅನುಪಮ, ಶಾಂತಮ್ಮ, ಕಲ್ಪನಾ, ಮಂಜುಳಾ, ನಾಗಮ್ಮ, ಚಿಕ್ಕತಾಯಮ್ಮ, ಹೇಮಾವತಿ ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.