ADVERTISEMENT

ನೈರ್ಮಲ್ಯ ರಕ್ಷಣೆಗೆ ಒತ್ತು ನೀಡುವುದೇ ನಗರಸಭೆ ಬಜೆಟ್?

ಉ.ಮ.ಮಹೇಶ್
Published 14 ಮಾರ್ಚ್ 2011, 9:20 IST
Last Updated 14 ಮಾರ್ಚ್ 2011, 9:20 IST

ಮಂಡ್ಯ: ನಗರಸಭೆ ಇನ್ನೊಂದು ಆಯವ್ಯಯ ಮಂಡಿಸಲು ಸಜ್ಜಾಗುತ್ತಿದ್ದು, ತಿಂಗಳಾಂತ್ಯದೊಳಗೆ ಬಜೆಟ್ ಮಂಡನೆ ಆಗಲಿದೆ. ನಗರದ ಅಭಿವೃದ್ಧಿ ಮತ್ತು ಸುಧಾರಣೆ ಕುರಿತು ನಗರ ಸಭೆಯ ಆಡಳಿತ ಚರ್ಚೆ ಆರಂಭಿಸಿ ್ದದರೂ, ನಾಗರಿಕರನ್ನು ಕಾಡುತ್ತಿರುವ ಕಸ ನಿರ್ವಹಣೆ, ಸಾಗಣೆ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಗಳಿಲ್ಲ. ನಗರಸಭೆಯ 11-12ನೇ ಸಾಲಿನ ಆಯವ್ಯಯ ಮಂಡನೆ ಹಿನ್ನೆಲೆಯಲ್ಲಿ ಸಲಹೆ ಪಡೆಯಲು ಈಚೆಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದ ನಗರಸಭೆ ಕೆಲ ಸದಸ್ಯರೂ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದರು.

‘ನಗರಸಭೆಯಿಂದ ನಾಗರಿಕರು ನಿರೀಕ್ಷೆ ಮಾಡುವುದು ನಗರದ ಸ್ವಚ್ಛತೆ ಮತ್ತು ಮುಖ್ಯವಾಗಿ ಕಸ ವಿಲೇವಾರಿ ಕ್ರಮವನ್ನೇ. ಆದರೆ, ಮನೆ ಮನೆಯಿಂದ ಕಸ ಸಂಗ್ರಹಿಸುವುದು ಸೇರಿದಂತೆ ನವೀನ ಕ್ರಮಗಳಿಗೆ ನಾಗರಿಕರಿಂದಲೇ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಅಂಥ ಯಾವುದೇ ಹೊಸ ಕ್ರಮಗಳ ಚಿಂತನೆಯಿಲ್ಲ’ ಎಂಬುದು ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಅವರ ಅಭಿಪ್ರಾಯ.
ಕಸ ವಿಲೇವಾರಿಯನ್ನು ಪರಿಣಾಮ ಕಾರಿಗೊಳಿಸಲು ಟಿಪ್ಪರ್ ಖರೀದಿ, ಕಸ ಸಂಗ್ರಹ ಬಾಕ್ಸ್‌ಗಳನ್ನು ಹೆಚ್ಚುವರಿ ಯಾಗಿ ಖರೀದಿಸುತ್ತಿದ್ದು, ಕೆಲ ವಾಹನಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿವೆ. ಪರಿಸ್ಥಿತಿ ಉತ್ತಮ ಪಡಿಸಲು ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳುತ್ತಾರೆ.

ಮನೆಯಿಂದಲೇ ಕಸ ಸಂಗ್ರಹ ಕುರಿತು ಗಮನಸೆಳೆದಾಗ, ಇಂಥ ಕ್ರಮಗಳಿಗೆ ನೆಹರು ನಗರ, ಅಶೋಕನಗರ, ವಿದ್ಯಾನಗರ ಬಡಾವಣೆಯಲ್ಲಿಯೇ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಈಗಿನಂತೆ ಕಸ ವಿಲೇವಾರಿ ಮುಂದುವರಿಯಲಿದೆ ಎಂದರು. 2008ರಲ್ಲಿ ಕೆಲ ಸೇವಾ ಸಂಸ್ಥೆಗಳಿಗೆ ಬಡಾವಣೆಗಳನ್ನು ನಿಯೋಜಿಸಿ ಮನೆ, ಮನೆಯಿಂದಲೇ ಕಸ ಸಂಗ್ರಹಿಸಬೇಕು. ಅದಕ್ಕಾಗಿ ಮನೆಯಿಂದಲೇ ಶುಲ್ಕ ಸಂಗ್ರಹಿಸಲು ಸೂಚಿಸಿ, ನಗರಸಭೆಯೇ ಮಾಸಿಕ ಕನಿಷ್ಠ ರೂ. 10 ರಿಂದ 100 ರವರೆಗೂ ಶುಲ್ಕವನ್ನು ನಿಗದಿ ಪಡಿಸಿತ್ತು.

ನಗರಸಭೆಯ ಮಾಹಿತಿಯ ಪ್ರಕಾರ, ಇಂಥ ಯೋಜನೆಯು ನಗರದ 11ವಾರ್ಡ್‌ಗಳಲ್ಲಿ (9, 10, 11, 12, 32, 33,34, 35) ಜಾರಿಗೆ ಬಂದಿತ್ತು. ಮನೆ, ವಾಣಿಜ್ಯ ಮಳಿಗೆ, ಹೋಟೆಲ್, ಕಲ್ಯಾಣ ಮಂಟಪಗಳಿಗೆ ಭಿನ್ನ ದರ ನಿಗದಿಪಡಿಸಲಾಗಿತ್ತು. ನಿರ್ಮಲ ನಗರ ಯೋಜನೆಯಲ್ಲಿ ಜಾರಿಗೆ ಬಂದ ಇದು ನಗರವನ್ನು ನಿರ್ಮಲ ಆಗಿಸಲು ನೆರವಾಗಲಿಲ್ಲ. ಈಗ ಮತ್ತೆ ಬಜೆಟ್ ಮಂಡಿಸಲು ಸಿದ್ಧತೆ ಆಗುತ್ತಿರುವ ಸಂದರ್ಭದಲ್ಲಿ ನಗರದ ನೈರ್ಮಲ್ಯ ರಕ್ಷಣೆ ದೃಷ್ಟಿ ಯಿಂದ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಾದ, ಇದಕ್ಕೆ ಪೂರಕ ವಾಗಿ ಸಂಘ-ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳುವ ಚಿಂತನೆಯಂತೂ ನಡೆಯುತ್ತಿಲ್ಲ.

ಸ್ಪಷ್ಟ ಯೋಜನೆಯಿಲ್ಲದ ಕಾರಣ ಬರುವ ದಿನಗಳಲ್ಲೂ ರಸ್ತೆಗಳಲ್ಲೇ ಕಸದ ರಾಶಿ ಹಾಗೂ ಅದಕ್ಕೆ ಹಚ್ಚುವ ಬೆಂಕಿಯಿಂದ ಪರಿಸರ ಮಾಲಿನ್ಯ ನಗರದ ಜನರ ಪಾಲಿಗೆ ನಿತ್ಯದ ಬದುಕಿನ ಭಾಗವೇ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.