ADVERTISEMENT

ಪತ್ನಿ ಎದುರೇ ಪತಿ ಕೊಲೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 8:50 IST
Last Updated 21 ಮಾರ್ಚ್ 2012, 8:50 IST

ನಾಗಮಂಗಲ: ಪತ್ನಿಯ ಎದುರೆ ಚಾಕುವಿನಿಂದ ಇರಿದು ಪತಿಯನ್ನು ಕೊಲೆ ಮಾಡಿರುವ ಧಾರುಣ ಘಟನೆ ಸೋಮವಾರ ಮಧ್ಯರಾತ್ರಿ ಪಟ್ಟಣದ 1 ನೇ ವಾರ್ಡ್‌ನ ಮುರಾದ್ ನಗರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮುರಾದ್ ನಗರದ ನಿವಾಸಿ ಮೆಹಬೂಬ್ ಪಾಷ(40) ಎಂದು ಗುರುತಿಸಲಾಗಿದೆ. ಎದೆಯ 2 ಭಾಗ ಮತ್ತು ಕುತ್ತಿಗೆಯ ಬಳಿ ಚಾಕುವಿನಿಂದ ಇರಿದ ಗುರುತಿದೆ. ಮೆಹಬೂಬ್ ಮೂಲತಃ ಮಂಡ್ಯ ತಾಲ್ಲೂಕಿನ ಗೂಬೆ ಹಳ್ಳದವರು. ಈತ 1 ವರ್ಷದ ಹಿಂದೆ ನಾಗಮಂಗಲಕ್ಕೆ ಬಂದು ಕುಟುಂಬ ಸಮೇತ ಸಾಕಮ್ಮ ಎಂಬುವವರ ಒಡೆತನಕ್ಕೆ ಸೇರಿದ ಹೆಂಚಿನ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ. ಇದಕ್ಕೂ ಮೊದಲು ತುಮಕೂರು ಜಿಲ್ಲೆಯ ಸಿರಾದಲ್ಲಿ 8 ವರ್ಷಗಳ ಕಾಲ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡ್ದ್ದಿದುದಾಗಿ ಪತ್ನಿ ಝುಲೇಖಾ ತಿಳಿಸಿದ್ದಾರೆ.

ಘಟನೆ ವಿವರ: ಸೋಮವಾರ ರಾತ್ರಿ 11ಘಂಟೆ ವೇಳೆಗೆ ಬಾಗಿಲು ಬಡಿದ ಸದ್ದಾಯಿತು. ಯಾರು ಎಂದು ಕೇಳಿದರೆ ಯಾರು ಮತನಾಡಲಿಲ್ಲ. ನನ್ನ ಗಂಡ ನಾನೆ ನೋಡುತ್ತೇನೆ ಎಂದು ಬಾಗಿಲು ತೆರೆದರು. ಬಂದ ವ್ಯಕ್ತಿಗೆ ಊಟ ಮಾಡು ಎಂದು ಕೂಡ ಹೇಳಿದರು. ಆತ ಇಲ್ಲ ಯಾವುದೊ ಮದುವೆಗೆ ಬಂದಿದ್ದೆ ಅಲ್ಲೇ ಊಟ ಆಯಿತು ಎಂದು ಹೇಳಿ ನಿನ್ನೊಡನೆ ಮಾತನಾಡಬೇಕು ಎಂದು ಕರೆದ. ನನ್ನ ಯಜಮಾನರು ಶರ್ಟ್ ಧರಿಸಿ ಬರುವುದಾಗಿ ಹೇಳಿ ಒಳ ಬಂದು ಚಿಲಕ ಹಾಕಿಕೊ ಎಂದು ಹೇಳಿ ಹೋದರು. 5 ನಿಮಿಷಗಳ ನಂತರ ನನ್ನನ್ನು ಬಿಟ್ಟು ಬಿಡಿ ಎಂದು ನನ್ನ ಯಜಮಾನರು ಕಿರುಚಿದ್ದು ಕೇಳಿಸಿತು. ಬಾಗಿಲು ತೆರೆದು ನೋಡಿದಾಗ 3 ಮಂದಿ 3 ಕಡೆ ಚಾಕುವಿನಿಂದ ಚುಚ್ಚಿ ಬಿಳಿಯ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಪರಾರಿಯಾದರು ಎಂಬುದಾಗಿ ಮೆಹಬೂಬ್ ಪತ್ನಿ ಝಲೇಖಾ ಹೇಳಿಕೆ ನೀಡಿದ್ದಾರೆ.

ಸ್ಥಳಕ್ಕೆ ಐಜಿ ಮೂರ್ತಿ, ಮಂಡ್ಯ ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ಟಿ.ಡಿ.ರಾಜು ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.