ADVERTISEMENT

ಪರಂಪರೆಗೆ ಪುಷ್ಟಿ ನೀಡಿದ ಮಣ್ಣಿನ ಸಂಸ್ಕೃತಿ

‘ಹೊನ್ನಾರು’ ಕಟ್ಟುವ ಮೂಲಕ ಈ ವರ್ಷದ ಕೃಷಿ ಸಾಕ್ಷರತೆಗೆ ಮುನ್ನುಡಿ

ಎನ್.ಆರ್.ದೇವಾನಂದ್
Published 23 ಮಾರ್ಚ್ 2015, 9:50 IST
Last Updated 23 ಮಾರ್ಚ್ 2015, 9:50 IST

ನಾಗಮಂಗಲ: ನಮ್ಮ ದೇಶದ ಬೆನ್ನೆಲುಬು ರೈತ. ಆಧುನಿಕವಾಗಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರ ಜೊತೆ ಜೊತೆಯಲ್ಲಿ ನಮ್ಮ ಪರಂಪರೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಂದಿಗೂ ಜೀವಂತ ಸಾಕ್ಷಿ ಎಂದರೆ ಕಾಲದಿಂದಲೂ ನಡೆಸಿಕೊಂಡು ಬಂದಿರುವ ‘ಹೊನ್ನಾರು‘ ಕಟ್ಟುವ ಸಂಪ್ರದಾಯ.

ಹೊನ್ನಾರು ಎಂದರೆ, ಹೊನ್ನಿನ ಆರು ಅಥವ ಹೊನ್ನಿನಂತಹ ಬೆಳೆಗಾಗಿ ಮಾಡುವ ಉಳುಮೆ ಎಂದರ್ಥ. ಆದರೆ, ಈ ಹೊನ್ನಾರು ಕಟ್ಟುವುದನ್ನು ಪ್ರತಿ ಯುಗಾದಿ ಅಥವ ಹಬ್ಬದ ಮಾರನೆಯ ದಿನ ಆಚರಿಸುವದು ಒಂದು ವಿಶೇಷ. ಯುಗಾದಿಯ ನಂತರ ಅಶ್ವಿನಿ ಮಳೆ ಪ್ರಾರಂಭವಾಗುವುದರಿಂದ ಮುಂಗಾ ರಿನ ಬೇಸಾಯಕ್ಕೆ ನಾಂದಿ ಎಂದು ಕೆಲ ಹಿರಿಯ ರೈತರು ಅಭಿಪ್ರಾಯ ಪಡುತ್ತಾರೆ.

ಮತ್ತೆ ಕೆಲವರು ಯುಗಾದಿಯ ನಂತರದ ದಿನದ ಚಂದ್ರ ದರ್ಶನದಿಂದ ಶುಭ, ಯಾವುದೆ ಬೆಳೆಯ ಇಳುವರಿಗೆ ಚಂದ್ರನ ಕಿರಣಗಳೆ ಕಾರಣ. ಆದುದ ರಿಂದ, ವರ್ಷದ ಪ್ರಾರಂಭದ ದಿನವಾದ ಇಂದು ಬೇಸಾಯಕ್ಕೆ ನಾಂದಿ ಹಾಡು ವುದು ಒಳ್ಳೆಯದು ಎಂದು ಹೇಳುತ್ತಾರೆ.

ಇನ್ನೂ ಸಾಮಾನ್ಯವಾಗಿ ಯುಗಾದಿಯ ನಂತರದ ದಿನ ಸಂಜೆ ಆಕಾಶದಲ್ಲಿ ಗೋಚರಿಸುವ ಚಂದ್ರನನ್ನು ಸಮಾಜದ ಆಯ ವ್ಯಯಗಳನ್ನು ನಿರ್ಧರಿಸುವ ತಕ್ಕಡಿಗೆ ಹೋಲಿಸಿ, ಕಾಣುವ ಚಂದ್ರ ಉತ್ತರಕ್ಕೆ ಇಳಿಮುಖವಾಗಿದ್ದರೆ ಮಳೆಯ ಪ್ರಮಾಣ ಕಡಿಮೆಯಾಗಿ ಬೆಳೆಯ ಇಳುವರಿಯಲ್ಲಿ ಇಳಿಮುಖವಾಗಿ ಆಹಾರ ಪಧಾರ್ಥಗಳ ಬೆಲೆ ಏರುತ್ತದೆ. ಅಥವ ದಕ್ಷಿಣ ದಿಕ್ಕಿಗೆ ಇಳಿಮುಖವಾಗಿದ್ದರೆ ಮಳೆ ಬೆಳೆ ಚೆನ್ನಾಗಿ ಆಗುವ ಮೂಲಕ ದೇಶ ಸಮೃದ್ಧಿಯಿಂದ ಕೂಡಿರುತ್ತದೆ ಎನ್ನುವ ನಂಬಿಕೆ ಕೆಲ ಮಂದಿ ರೈತರದ್ದು.

ಹೆಸರು ಬಲದ ಮೇಲೆ ಹೊನ್ನಾರಿನ ನಂಬಿಕೆ: ಇನ್ನು ಪ್ರತಿ ಗ್ರಾಮಗಳಲ್ಲಿಯೂ ಹೊನ್ನಾರು ಕಟ್ಟುವುದು ಸಾಮಾನ್ಯವಾದರೂ, ಪ್ರತಿ ಗ್ರಾಮದ ಮುಖಂಡರು ಸಂಬಂಧಿಸಿದ ಜೋಯಿಸರ ಬಳಿ ಈ ಸಾಲಿನ ಕೃಷಿ ಚಟುವಟಿಕೆಗಳನ್ನು ಯಾರ ಹೆಸರಿನ ಮೇಲೆ ಪ್ರಾರಂಭಿಸಬೇಕೆಂದು ಕೇಳಿ, ಅದರಂತೆ ಪುರೋಹಿತರು ಹೇಳಿದ ಹೆಸರಿನ ವ್ಯಕ್ತಿಯಿಂದಲೇ ಹೊನ್ನಾರು ಕಟ್ಟಿಸುವುದು ವಾಡಿಕೆ ಮತ್ತು ನಂಬಿಕೆ.

ತಾಲ್ಲೂಕಿನ ಮುಳುಕಟ್ಟೆ ಗ್ರಾಮದಲ್ಲಿ ಹೊನ್ನಾರು: ತಾಲ್ಲೂಕಿನಾದ್ಯಂತ ಆಚರಿಸುವ ಹೊನ್ನಾರು ಕಟ್ಟುವ ಆಚರಣೆಗೆ ಮುಳುಕಟ್ಟೆ ಗ್ರಾಮವು ಸಹ ಒಂದು. ಈ ಗ್ರಾಮದ ರಂಗದ ಅಟ್ಟಿಯಲ್ಲಿರುವ ಬಸವಣ್ಣನ ದೇವಾಸ್ಥಾನದ ಹತ್ತಿರ ಮುಖಂಡರು ಮತ್ತು ಗ್ರಾಮಸ್ಥರು ಒಟ್ಟುಗೂಡಿ ಹೊನ್ನಾರು ಕಟ್ಟವ ವ್ಯಕ್ತಿ ಮತ್ತು ಎತ್ತುಗಳನ್ನು ಹಾಗೂ ರೈತರ ಅಸ್ತ್ರ ನೇಗಿಲಿಗೆ ಪೂಜೆ ಸಲ್ಲಿಸಿದರು. ಊರಿನ ಮುತ್ತೈದೆಯರಿಂದ ಗೋ ಪೂಜೆ ಮಾಡಿಸಲಾಯಿತು.

ಗ್ರಾಮದ ಪುರೋಹಿತ  ತಿಳಿಸಿದಂತೆ ದ್ಯಾವೇಗೌಡ ಎಂಬ ರೈತನಿಂದ ಹೊನ್ನಾರು ಕಟ್ಟಿಸಿದರು. ಊರಿನ ದೇವಮೂಲೆಯ ಜಮೀನೊಂದರಲ್ಲಿ ಉಳುಮೆ ಮಾಡುವ ಮೂಲಕ ಭೂಮಿ ತಾಯಿಗೆ ಜೈ, ಮಳೆ ರಾಯನಿಗೆ ಜೈ, ಗೋಮಾತೆಗೆ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ರೈತರು ಹೊನ್ನಾರಿನೊಂದಿಗೆ ಹೆಜ್ಜೆ ಹಾಕಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.