ADVERTISEMENT

ಪಿಎಸ್‌ಎಸ್‌ಕೆ: ಕಬ್ಬು ಅರೆಯುವ ಸಾಮರ್ಥ್ಯ ಶೀಘ್ರ ಹೆಚ್ಚಳ-ಮಲ್ಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:45 IST
Last Updated 18 ಅಕ್ಟೋಬರ್ 2011, 9:45 IST

ಪಾಂಡವಪುರ: ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಸಾಮರ್ಥ್ಯವನ್ನು ಶೀಘ್ರವೇ ನಿತ್ಯ 3 ಸಾವಿರ ಟನ್‌ಗೆ ಹೆಚ್ಚಿಸಲಾಗುವುದು ಎಂದು ನೂತನ ವ್ಯವಸ್ಥಾಪಕ ನಿರ್ದೇಶಕ ಡಿ.ಮಲ್ಲು ಹೇಳಿದರು.

ಸೋಮವಾರ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಚುರುಕುಗೊಳಿಸಲಿದ್ದು, ಶೇ 9ರಷ್ಟು ಇಳುವರಿಯನ್ನು ಕಾಯ್ದುಕೊಳ್ಳಲಾಗುವುದು ಎಂದರು.

ಕಾರ್ಖಾನೆ ಕಾರ್ಯವನ್ನು ಪರೀಶೀಲಿಸಿದ್ದೇನೆ. ಯಂತ್ರಗಳ ಸಣ್ಣಪುಟ್ಟ ದುರಸ್ತಿ ಹಾಗೂ ಶುಚಿತ್ವ ಕಾರ್ಯ ಇದೆ. ಬಳಿಕ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ರೈತರು ಯಾವುದೇ ವದಂತಿಗೆ ಕಿವಿಕೊಡಬಾರದು ಎಂದರು.

ಕಳೆದ ಹಂಗಾಮಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರ ಹಣ ಬಾಕಿ ಉಳಿದಿಲ್ಲ. ಈ ಸಾಲಿನಲ್ಲಿ ಈವರೆಗೆ ಸರಬರಾಜು ಮಾಡಿದ ರೈತರ ಹಣವನ್ನು ಸೆಪ್ಟೆಂಬರ್‌ನಲ್ಲಿಯೇ ಪಾವತಿ ಮಾಡಲಾಗಿದೆ. ಕಾರ್ಖಾನೆ ಲೆಕ್ಕಪತ್ರ ಪರಿಶೋಧನೆ ನಡೆಯುತ್ತಿದ್ದು, ರೈತರಿಗೆ ಶೀಘ್ರ ಮಾಹಿತಿ ಒದಗಿಸಲಾಗುವುದು ಎಂದರು.

ಕೂಡಲೇ ಕಾರ್ಮಿಕರ ಸಭೆ ನಡೆಸಿ ಕುಂದುಕೊರತೆ ಆಲಿಸಲಾಗುವುದು. ಕಾರ್ಮಿಕರು ಗುಂಪುಗಾರಿಕೆಯಲ್ಲಿ ತೊಡಗದೆ ಕಾರ್ಖಾನೆಯ ಉನ್ನತೀಕರಣಕ್ಕೆ ಶ್ರಮಿಸಬೇಕೆಂದು ಮನವಿ ಮಾಡಿದರು. ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಆಲ್ಫನ್ಸ್ ರಾಜ, ಮುಖ್ಯ ಲೆಕ್ಕಾಧಿಕಾರಿ ರಾಮಲಿಂಗಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.