ADVERTISEMENT

ಪುರಸಭೆ ವರಿಷ್ಠರ ಚುನಾವಣೆ ಮುಂದೂಡಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:41 IST
Last Updated 5 ಸೆಪ್ಟೆಂಬರ್ 2013, 8:41 IST

ಶ್ರೀರಂಗಪಟ್ಟಣ: ಇಲ್ಲಿಯ ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ (ಮಹಿಳೆ)ಗೆ ಮೀಸಲಿಟ್ಟಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಿರುವುದರಿಂದ ಸೆ.12ರಂದು ನಿಗದಿಯಾಗಿರುವ ಪುರಸಭೆ ವರಿಷ್ಠರ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಕೆಲ ಪುರಸಭೆ ಸದಸ್ಯರು ಬುಧವಾರ ಪ್ರಭಾರ ತಹಶೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಸದಸ್ಯರಾದ ಪಾರ್ವತಮ್ಮ, ವೆಂಕಟಸ್ವಾಮಿ, ಬಿಜೆಪಿ ಸದಸ್ಯ ಎಸ್.ಪ್ರಕಾಶ್, ಪಕ್ಷೇತರ ಸದಸ್ಯ ನಂದೀಶ್ ಚುನಾವಣಾಧಿಕಾರಿಯೂ ಆದ ಪ್ರಭಾರ ತಹಶೀಲ್ದಾರ್ ಸುರೇಶ್ ಅವರಿಗೆ ಮನವಿ ನೀಡಿದರು. ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಾಗಿರುವ ಕ್ರಮವನ್ನು ಕಾಂಗ್ರೆಸ್(23ನೇ ವಾರ್ಡ್) ಸದಸ್ಯೆ ಪಾರ್ವತಮ್ಮ ಹೈ ಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ಅಂಗೀಕರಿಸಿದೆ. ಗುರುವಾರ ಸದರಿ ಅರ್ಜಿಯ ವಿಚಾರಣೆ ನಡೆಯಲಿದೆ. ಹಾಗಾಗಿ ಚುನಾವಣೆ ಮುಂದೂಡಬೇಕು ಎಂದು ಅವರು ಕೋರಿದ್ದಾರೆ.

ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ (ಎ) ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸೆ.12ರಂದು ನಿಗದಿಯಾಗಿದೆ.

ಈ ಸಂಬಂಧ 23 ಸದಸ್ಯರಿಗೂ ಅಂಚೆ ಮೂಲಕ ಚುನಾವಣಾ ಪ್ರಕ್ರಿಯೆಯ ಪತ್ರ ರವಾನಿಸಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ. ಇಲ್ಲಿನ ಪುರಸಭೆಯ 23 ಸದಸ್ಯರ ಪೈಕಿ ಕಾಂಗ್ರೆಸ್-7, ಜೆಡಿಎಸ್-6, ಬಿಜೆಪಿ-3, ಬಿಎಸ್‌ಆರ್-1, ಹಾಗೂ 6 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್‌ನಿಂದ ಆಯ್ಕೆಯಾಗಿರುವ ಸುಮಾ ಶೇಖರ್ (2ನೇ ವಾರ್ಡ್) ಮಾತ್ರ ಆ ಪಂಗಡಕ್ಕೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.