ನಾಗಮಂಗಲ: ತಾಲ್ಲೂಕಿನ ದೇವಲಾಪುರ ಪದವಿಪೂರ್ವ ಕಾಲೇಜಿನಲ್ಲಿರುವ ಸರ್ಕಾರಿ ಪ್ರೌಢಶಾಲೆ ಇತರ ಶಾಲೆಗಳಿಗಿಂತ ಭಿನ್ನವಾಗಿದ್ದು, ಮಾದರಿಯಾಗಿದೆ.
ಶಿಕ್ಷಣ, ಕಲೆ, ಕ್ರೀಡೆ, ಆಟೋಟ ಸೇರಿದಂತೆ ವಿವಿಧ ರಂಗಗಳಲ್ಲಿ ಶಾಲೆ ತನ್ನದೇ ಆದ ವಿಶಿಷ್ಟ ಸಾಧನೆ ಮೆರೆದಿದೆ. ಮೂರು ವರ್ಷಗಳಿಂದ ಶೇ 100 ಫಲಿತಾಂಶ ಕಾಯ್ದುಕೊಂಡು ಬರುತ್ತಿದೆ. 2012–13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ವಾರ್ಷಿಕ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಪೈಕಿ ಅತಿ ಹೆಚ್ಚು ಅಂಕಗಳಿಸಿದ 13 ವಿದ್ಯಾರ್ಥಿಗಳಲ್ಲಿ 8 ಮಂದಿ ಈ ಶಾಲೆಗೆ ಸೇರಿದವರು ಎನ್ನುವುದು ಗಮನಾರ್ಹ.
ಎರಡು ವರ್ಷಗಳಿಂದ ಸತತವಾಗಿ ಶಾಲೆಯ ವಿದ್ಯಾರ್ಥಿನಿಯರ ಕಬಡ್ಡಿ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಕಾಯ್ದಿರಿಸಿದೆ. ಗಮನಿಸಬೇಕಾದ ಅಂಶವೆಂದರೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೇ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ!
ನಾಟಕ ಕಲೆಯಲ್ಲಿ ಈ ಶಾಲೆಯ ಮಕ್ಕಳ ಸಾಧನೆ ತಾಲ್ಲೂಕಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕವನ್ನು ರಾತ್ರಿಯಿಡೀ ಪ್ರದರ್ಶಿಸಿದ ಹಿರಿಮೆ ಇವರದು.
ಭಾವಗೀತೆ, ರಂಗಗೀತೆ, ಕೋಲಾಟ, ಪ್ರಬಂಧ, ಭಾಷಣ ಸ್ಪರ್ಧೆ ಅದರಲ್ಲೂ ವಿಶೇಷವಾಗಿ ಜನಪದಗೀತೆ ಗಾಯನ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ಕೊಡಮಾಡುವ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಷಿಪ್ ಗೆ 2012–13 ನೇ ಸಾಲಿನಲ್ಲಿ ಈ ಶಾಲೆಯ 3 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನಾಗಮಂಗಲ ಕಲಾವಿದರ ಸಂಘವು 10ನೇ ತರಗತಿ ವಿದ್ಯಾರ್ಥಿನಿ ಡಿ.ಎಸ್. ನಂದಿನಿ ಅವರನ್ನು ಅತ್ಯುತ್ತಮ ಬಾಲಕಲಾವಿದೆ ಎಂದು ಗುರುತಿಸಿ ಗೌರವಿಸಿದೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಗಂಡುಮಕ್ಕಳಿಗೆ ರಾತ್ರಿ ಶಾಲೆ ಮಾಡಿ ವಿಶೇಷ ತರಬೇತಿ ನೀಡುತ್ತಿರುವುದು ಶಾಲೆಯ ಹತ್ತು ಹಲವು ವಿಶೇಷತೆಗಳಲ್ಲೊಂದು.
ಕಳೆದ ಎರಡು ವರ್ಷದಿಂದ ಸ್ಕೂಲ್ ಡೇ ಸಮಯದಲ್ಲಿ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ‘ಹಕ್ಕಿದನಿ’ ಎಂಬ ಸಂಚಿಕೆ ಬಿಡುಗಡೆ ಮಾಡಲಾಗುತ್ತಿದೆ. ಈ ಸಂಚಿಕೆ ಸಂಪೂರ್ಣ ವಿದ್ಯಾರ್ಥಿಗಳಿಂದ ರಚಿತವಾಗಿರುತ್ತದೆ. ವಿದ್ಯಾರ್ಥಿಗಳೇ ರಚಿಸಿದ ಡ್ರಾಯಿಂಗ್, ಪೇಂಟಿಂಗ್, ಹನಿಗವನ, ಕಿರುಕಥೆ, ಸಂಗ್ರಹ ವಿಷಯಗಳನ್ನೊಳ ಗೊಂಡ ವಿಶಿಷ್ಟ ಸಂಚಿಕೆ ಇದು.
ಶಾಲೆಗೆ ಅಡಿಯಿಡುತ್ತಿದ್ದಂತೆ ಸುಂದರ ಹೂದೋಟ ಸ್ವಾಗತ ಕೋರುತ್ತದೆ. ಪ್ರತ್ಯೇಕ ಪ್ರಯೋಗಾಲಯ, ಗ್ರಂಥಾಲಯಗಳ ಜೊತೆ ಜೊತೆಗೆ ಮಲ್ಟಿಮೀಡಿಯಾ ಟೀಚಿಂಗ್ ರೂಂ ಇದೆ. ಈ ವ್ಯವಸ್ಥೆ ಈ ಶಾಲೆಯಲ್ಲಿ ಮಾತ್ರ ಕಾಣ ಸಿಗುತ್ತದೆ. ಮಕ್ಕಳೇ ತರಕಾರಿ ಬೆಳೆದುಕೊಳ್ಳುತ್ತಾರೆ. ಶಾಲೆ ಇಷ್ಟೆಲ್ಲಾ ಸಾಧನೆ ಮಾಡಲು ಎಸ್‌ಡಿಎಂಸಿ, ಗ್ರಾಮಸ್ಥರ ಹಾಗೂ ಸಹ ಶಿಕ್ಷಕರ ಸಹಕಾರ ಕಾರಣ ಎನ್ನುವುದು ಮುಖ್ಯ ಶಿಕ್ಷಕ ಎನ್.ಸಿ. ಶಿವಕುಮಾರ್ ಅಭಿಮತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.