ADVERTISEMENT

ಬತ್ತದ ಬೆಳೆಗೆ ಬೆಂಕಿ ರೋಗ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:43 IST
Last Updated 18 ಸೆಪ್ಟೆಂಬರ್ 2013, 6:43 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವ ಪುರ, ಕೂಡಲಕುಪ್ಪೆ, ಕಿರಂಗೂರು, ನಗುವನಹಳ್ಳಿ, ಚಂದಗಾಲು, ಚಿನ್ನೇನಹಳ್ಳಿ, ಟಿ.ಎಂ. ಹೊಸೂರು ಇತರೆಡೆ ಬೆಳೆದಿರುವ ಬತ್ತದ ಬೆಳೆಯಲ್ಲಿೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಒಂದು ತಿಂಗಳ ಹಿಂದೆ ನಾಟಿ ಮಾಡಿರುವ ಬತ್ತದ ಬೆಳೆಯಲ್ಲಿ ಈ ರೋಗ ಕಂಡುಬಂದಿದೆ. ಬತ್ತದ ಪೈರಿನ ಗರಿಗಳಲ್ಲಿ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು ನಂತರ ಅವು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಮಚ್ಚೆಗಳು ಕಾಣಿಸಿಕೊಂಡ ವಾರದಲ್ಲಿ ಗರಿಗಳು ಸುಟ್ಟಂತೆ ಕಂಡು ಬರುತ್ತಿವೆ. ಮೊದಲ ಬಾರಿಗೆ ರಸಗೊಬ್ಬರ ಕೊಟ್ಟ 10ರಿಂದ 12 ದಿನಗಳಲ್ಲಿ ಬೆಂಕಿ ರೋಗ ಹರಡುತ್ತಿದೆ. ಎಂಟಿಯು–1001 ತಳಿಯ ಬೆಳೆಯಲ್ಲಿ ಈ ರೋಗ ಹೆಚ್ಚು ಕಾಣಸಿಕೊಳ್ಳುತ್ತಿದೆ.

ಬೆಂಕಿ ರೋಗ ಕಾಣಿಸಿಕೊಳ್ಳು ತ್ತಿರುವುದರಿಂದ ರೈತರು ಆತಂಕಕ್ಕೆ ಈಡಗಿದ್ದಾರೆ. ಈ ರೋಗಬಾಧೆ ಇಡೀ ಬೆಳೆಯನ್ನೇ ಕುಂದಿಸುತ್ತದೆ. ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ರೈತರಾದ ಚಿನ್ನೇನಹಳ್ಳಿ ರೇವಣಾರಾಧ್ಯ, ಚಂದಗಾಲು ಶಂಕರ್‌, ಟಿ.ಎಂ. ಹೊಸೂರು ಮಹೇಶ್‌ ಇತರರು ಕಳವಳ ವ್ಯಕ್ತಪಡಿಸುತ್ತಾರೆ. ಬೆಂಕಿ ರೋಗ ಅಂಟಿರುವ ಭತ್ತದ ಬೆಳೆಗೆ ಶೀಘ್ರ ಕೀಟನಾಶಕ ಸಿಂಪಡಿಸಿ ರೋಗ ಹರಡು ವುದನ್ನು ತಡೆಯಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರೋಗ ಬಾಧೆ ಕಂಡುಬಂದ ತಕ್ಷಣ ಒಂದು ಲೀಟರ್‌ಗೆ ಒಂದು ಗ್ರಾಂ ಕಾರ್ಬನ್‌ ಡೈಜಿಂ ಕೀಟನಾಶಕ ಬೆರೆಸಿದ ದ್ರಾವಣವನ್ನು ಎಕೆರೆಗೆ 150ರಿಂದ 200 ಲೀಟರ್‌ ಪ್ರಮಾಣದಲ್ಲಿ ಸಿಂಪಡಿಸಬೇಕು. ಯೂರಿಯಾ ರಸಗೊಬ್ಬರನ್ನು ಮಿತ ಪ್ರಮಾಣದಲ್ಲಿ ಕೊಡಬೇಕು.
ಕಾಂಡಕೊರಕ, ಎಲೆ ಸುರುಳಿ ಹಾಗೂ ಕೊಳವೆ ಹುಳು ಬಾಧೆ ಕಂಡು ಬಂದರೆ ಕ್ಲೊರೋಫೈರಿಪಾಸ್ ಕೀಟನಾಶಕ ದ್ರಾವಣವನ್ನು ಸಿಂಪಡಿಸ ಬೇಕು ಎಂದು ಸಲಹೆ ನೀಡಿದ್ದಾರೆ. ಬತ್ತದ ಬೆಳೆಯಲ್ಲಿನ ಬೆಂಕಿರೋಗ ಇತರ ರೋಗ ಬಾಧೆಗೆ ಅಗತ್ಯ ಕೀಟನಾಶಕಗಳು ರಿಯಾಯಿತಿ ದರದಲ್ಲಿ ಲಭ್ಯ ಇದ್ದು, ಕೃಷಿ ಇಲಾಖೆಯಲ್ಲಿ ಪಡೆಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.