ನಾಗಮಂಗಲ: ಮನುಜ ಪ್ರಜ್ಞೆ ಮರೆತು ಜೀವನ ಮಾಡಬಾರದು. ಮನುಷ್ಯನ ತನ್ನ ಅಂತ್ಯ ಕಾಲದಲ್ಲಿ ಬದುಕನ್ನು ಅವಲೋಕಿಸಿದಾಗ ಆತನಿಗೆ ಶೂನ್ಯ ಭಾವ ಕಾಡಬಾರದು ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಾಮಕಹಳ್ಳಿಯಲ್ಲಿ ಸೋಮವಾರ ನಡೆದ ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನದ ಗೋಪುರ ಕಳಶ ಪ್ರತಿಷ್ಠಾಪನೆ ಮತ್ತು ಬೇಟೆ ರಂಗನಾಥಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರನ್ನು ಸ್ಮರಿಸಲು ಧ್ಯಾನಾವಸ್ಥೆಯ ಮನಸ್ಥಿತಿ ಮುಖ್ಯ. ನಿರಾಕಾರದ ದೈವ ಸ್ವರೂಪವನ್ನು ಅರ್ಥೈಸುವಂತೆ ಮಾಡುವ ಪ್ರಕ್ರಿಯೆಯ ಭಾಗವೇ ದೇವಾಲಯಗಳ ನಿರ್ಮಾಣ. ಅಂತರಂಗದ ಕಣ್ಣುಗಳಿಂದ ದೇವರ ಅಸ್ತಿತ್ವ ಅರಿಯಲು ಸಾಧ್ಯ. ಸೂಕ್ಷ್ಮದರಲ್ಲಿ ಸೂಕ್ಷ್ಮ, ಮಹತ್ತರದಲ್ಲಿ ಮಹತ್ತರವಾಗಿರುವುದೇ ದೇವರ ಅಸ್ತಿತ್ವ ಎಂದು ನುಡಿದರು.
ಹೆಚ್ಚು ಹೆಚ್ಚು ಆವಿಷ್ಕಾರಗಳು ನಡೆದಂತೆ ವಿಜ್ಞಾನ ಧರ್ಮದ ಅಸ್ತಿತ್ವವನ್ನು ಅಳಿಸುತ್ತದೆ ಎಂಬ ವಾದವನ್ನು ಮಂಡಿಸಿದವರೇ, ದೈವದ ನೆಲೆಯನ್ನು ಬಿಟ್ಟು ಬೇರೆ ಯಾವುದೇ ನೆಲೆ ಕಾಣುತ್ತಿಲ್ಲ ಎಂದು ಹಲುಬುತ್ತಿದ್ದಾರೆ.
ಎಷ್ಟೇ ಆವಿಷ್ಕಾರಗಳು ನಡೆದರೂ, ವಿಜ್ಞಾನ ಎತ್ತರೆತ್ತರಕ್ಕೆ ಹೋಗುತ್ತಿದ್ದರೂ ಕಡೆಗೆ ಅಧ್ಯಾತ್ಮದ ನೆಲೆಯಲ್ಲಿಯೇ ಉತ್ತರ ಹುಡುಕಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಶಾಸಕ ಎನ್. ಚಲುವರಾಯಸ್ವಾಮಿ ಮಾತನಾಡಿ, ಹತ್ತಾರು ವರ್ಷಗಳ ಬಯಕೆ ಸಾಕಾರಗೊಂಡಿದೆ. ಇರಲು ಮನೆ ಇಲ್ಲದಿದ್ದರೂ ಊರಿಗೊಂದು ದೇವಾಲಯ ನಿರ್ಮಾಣ ಮಾಡುವಲ್ಲಿ ಜನತೆ ಉತ್ಸುಕರಾಗಿದ್ದಾರೆ. ಎಲ್ಲರನ್ನು ಪ್ರೀತಿಯಿಂದ ವಿಶ್ವಾಸದಿಂದ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮನದಲ್ಲಿ ಕೆಟ್ಟತನ ಇದ್ದರೆ ಅದರ ಅಳುಕು ಹೆಚ್ಚು ಬಾಧಿಸುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿದರು. ದೇವಾಲಯಗಳ ಉದ್ಘಾಟನಾ ಅಂಗವಾಗಿ ಬೆಳಿಗ್ಗೆನಯಿಂದ ದೇವಾಲಯಗಳಲ್ಲಿ ರುದ್ರಹೋಮ, ಮೃತ್ಯಂಜಯ ಹೋಮ, ಅಭಿಷೇಕ, ಪೂರ್ಣಾಹುತಿ, ನೇತ್ರೋನ್ಮಿಲನ, ಕುಂಭಾಭಿಷೇಕ, ಮಹಾಮಂಗಳಾರತಿ ಒಳಗೊಂಡಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಉತ್ಸವದಲ್ಲಿ ನಾಗಮಂಗಲ ಮಹದೇವಪ್ಪ ತಂಡದಿಂದ ವೀರಗಾಸೆ, ಪಾಂಡವಪುರ ಚಂದ್ರು ತಂಡದಿಂದ ಡೊಳ್ಳುಕುಣಿತ, ಕೃಷ್ಣೇಗೌಡ ತಂಡದಿಂದ ಪಟಕುಣಿತ, ಮಂಡ್ಯ ಕೆ.ಎನ್. ರವಿ ತಂಡದಿಂದ ಪೂಜಾಕುಣಿತ, ಬೆಂಗಳೂರು ಆನೇಕಲ್ ತಾಲ್ಲೂಕಿನ ಸೊಸೆನೂರು ಕಂಠೀರವ ನೃತ್ಯ ಸಂಗೀತಾ ಸಭಾದಿಂದ ಕರಗ ಕುಣಿತ, ಮಂಗಳೂರಿನ ಚಂಡೆ ಮುಂತಾದವು ಗಮನ ಸೆಳೆದವು.
ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಜೇಗೌಡ, ಮುಖಂಡರಾದ ಕೊಣನೂರು ಹನುಮಂತು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.