ADVERTISEMENT

ಬಿಜೆಪಿ ಪ್ರಣಾಳಿಕೆ ರೈತರ ಬದುಕಿಗೆ ಆಧಾರ

ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎನ್‌.ಶಿವಣ್ಣ ಪರ ಸಿ.ಟಿ.ರವಿ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:22 IST
Last Updated 6 ಮೇ 2018, 12:22 IST

ಮಂಡ್ಯ: ‘ಚುನಾವಣೆ ಅಂಗವಾಗಿ ಬಿಜೆಪಿ ಹೊರತಂದಿರುವ ಪ್ರಣಾಳಿಕೆ ರೈತರ ಬದುಕಿಗೆ ಆಧಾರವಾಗಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಶಿವಣ್ಣ ಅವರ ಪರವಾಗಿ ನಗರದ ಪೇಟೆಬೀದಿಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕಳೆದ ಐದು ವರ್ಷಗಳಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಷುಗರ್‌ ಕಾರ್ಖಾನೆ ಸ್ಥಗಿತಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಳಜಿ ಇಲ್ಲ. ಕಾಂಗ್ರೆಸ್ ಸರ್ಕಾರ ಸಮಾಜ ಹಾಗೂ ಜಾತಿಯನ್ನು ಒಡೆದು ಆಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

₹50 ಸಾವಿರದವರೆಗಿನ ಸಹಕಾರಿ ಬ್ಯಾಂಕ್‌ನ ಸಾಲ ಮನ್ನಾ ಮಾಡಿದ್ದು ರೈತರನ್ನು ಒಡೆದು ಆಳುವ ನೀತಿಯ ಭಾಗವಾಗಿದೆ. ಬಿಜೆಪಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ₹ 1 ಲಕ್ಷದವರೆಗೆಗಿನ ಸಾಲ ಮನ್ನಾ ಮಾಡಲಿದೆ. ನೇಕಾರರ ಸಾಲ ಮನ್ನಾ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕದಂತೆ ಸ್ವಾವಲಂಬಿ ಜೀವನ ಮಾಡಲು ಈಗಾಗಲೇ ಯೋಜನೆ ರೂಪಿಸಿದ್ದೇವೆ’ ಎಂದು ಹೇಳಿದರು.

‘ಈಗಿರುವ ಭಾಗ್ಯಲಕ್ಷ್ಮಿ ಯೋಜನೆಗೆ ₹ 2 ಲಕ್ಷ ಹಣ ನೀಡಲಾಗುವುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉತ್ತೇಜನ ನೀಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬುಡಸಮೇತ ಕಿತ್ತು ಹಾಕುತ್ತೇವೆ. ಈ ಬಾರಿ ಮಂಡ್ಯದಲ್ಲಿ ಚಂದಗಾಲು ಎನ್.ಶಿವಣ್ಣ ವರ ಮೂಲಕ ಬಿಜೆಪಿ ಖಾತೆ ತೆರೆಯುತ್ತದೆ.  ಮಂಡ್ಯ ಭಾವನೆ ಇಂಡಿಯಾ ಜನರ ಭಾವನೆ ಜೊತೆ ಸೇರಿಕೊಳ್ಳಲಲಿದೆ’ ಎಂದು ಹೇಳಿದರು.

‘ಬಿಜೆಪಿ ಯಾವುದೇ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಬೇಕಾದ ಎಲ್ಲಾ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ. ಬಿಜೆಪಿ ರಾಷ್ಟ್ರವಾದಿ ಪಕ್ಷವಾಗಿದ್ದು, ರಾಷ್ಟ್ರದ ಹಿತವನ್ನು ಬಯಸುತ್ತದೆಯೇ ಹೊರತು ಕುಟುಂಬದ ಹಿತವನ್ನು ಬಯಸುವುದಿಲ್ಲ’ ಎಂದು ಹೇಳಿದರು.

ಜೋಧ್‌ಪುರ ರಾಜ್ಯಸಭಾ ಸದಸ್ಯ ನಾರಾಯಣ್ ಲಾಲ್ ಪಂಚಾರ್ಯ ಮಾತನಾಡಿ ‘ನಾನು ರಾಜ್ಯಕ್ಕೆ ಮೂರನೇ ಬಾರಿ ಪ್ರವಾಸ ಕೈಗೊಂಡಿದ್ದೇನೆ. ಪ್ರಸ್ತುತ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯು ಸರ್ಕಾರ ರಚನೆ ಮಾಡಲಿದೆ’ ಎಂದರು.

‘ಜೊತೆಗೆ ರಾಜ್ಯದ ಚುನಾವಣೆಗೆ ಮೋದಿ ಅಲೆ ಅಪ್ಪಳಿಸಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕ ರಚನೆಯಾಗಲಿದೆ. ಮಂಡ್ಯ ಜಿಲ್ಲೆಯಲ್ಲೂ ಗೆಲುವು ಸಾಧಿಸಲಿದೆ’ ಎಂದು ಹೇಳಿದರು.

ಮುಖಂಡರಾದ ಅಶ್ವತ್ಥ ನಾರಾಯಣ, ಎಚ್.ಆರ್.ಅರವಿಂದ್, ಮಲ್ಲಿಕಾರ್ಜುನ, ನಾಗಣ್ಣಗೌಡ, ಡಾ.ಸದಾನಂದ, ಸಿ.ಟಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.