ADVERTISEMENT

ಬೇಡಿಕೆ ಈಡೇರಿಕೆಗಾಗಿ ಅಂಗವಿಕಲರ ಉರುಳು ಸೇವೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 8:15 IST
Last Updated 22 ಫೆಬ್ರುವರಿ 2011, 8:15 IST

ಶ್ರೀರಂಗಪಟ್ಟಣ: ಸ್ಥಳೀಯ ಸಂಸ್ಥೆಗಳಲ್ಲಿ ಶೇ.3 ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸಿ ತಾಲ್ಲೂಕು ಅಂಗವಿಕಲ ಸಂಘದ ಸದಸ್ಯರು ಸೋಮವಾರ ಪಟ್ಟಣದಲ್ಲಿ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದರು.ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದ ಕುವೆಂಪು ಪುತ್ಥಳಿಯಿಂದ ಪುರಸಭೆ ಕಚೇರಿ ವರೆಗೆ ಉರುಳು ಸೇವೆ ನಡೆಯಿತು. ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

  ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಶೇ.3 ಅನುದಾನ ನೀಡುವ ಕುರಿತು ಸರ್ಕಾರದ ಆದೇಶ ಇದ್ದರೂ ಅನುಷ್ಠಾನಕ್ಕೆ ತರುತ್ತಿಲ್ಲ. ಅರ್ಹ ಅಂಗವಿಕಲರಿಗೆ ಅಂತ್ಯೋದಯ ಪಡಿತರ ಚೀಟಿ ವಿತರಿಸಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ. ಆಶ್ರಯ ಯೋಜನೆ ಮನೆ ಹಂಚಿಕೆಯಲ್ಲಿ ಅಂಗವಿಕಲರಿಗೆ ಸವಲತ್ತು ಸಿಗುತ್ತಿಲ್ಲ. ವಾರ್ಷಿಕ ಬಸ್ ಪಾಸ್ ದರವನ್ನು ರೂ.250 ರಿಂದ ರೂ.550ಕ್ಕೆ ಹೆಚ್ಚಿಸಿದ್ದು ಅಂಗವಿಕಲರಿಗೆ ಅನ್ಯಾಯವಾಗಿದೆ. ಶಿಕ್ಷಣ ಹಾಗೂ  ಉದ್ಯೋಗ ಕ್ಷೇತ್ರದಲ್ಲಿ ಅಂಗವಿಕಲರಿಗೆ ಸ್ಪಷ್ಟ ಮೀಸಲಾತಿ ನೀತಿ ಜಾರಿಯಾಗಬೇಕು.

ಸಾಲ ಸೌಲಭ್ಯ ಸಿಗಬೇಕು. ರಾಜಕೀಯ ಕ್ಷೇತ್ರದಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಬೇಕು ಎಂದು ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಚಲುವ ರಾಜು, ಮಾದೇಗೌಡ, ತಾಲ್ಲೂಕು ಅಧ್ಯಕ್ಷ ಮರಳಾಗಾಲ ಮಂಜುನಾಥ್ ಆಗ್ರಹಿಸಿದರು.

ಪಾಲಹಳ್ಳಿ ಶಂಭುಲಿಂಗೇಶ್ವರ ಅಂಗವಿಕಲರ ಸಂಘದ ಅಧ್ಯಕ್ಷ ಬಸವರಾಜು, ಬಿದರ ಹೊಸಹಳ್ಳಿ ಬೋರೇಗೌಡ ಇತರರು ಉರುಳು ಸೇವೆ ನಡೆಸಿದರು. ಅಂಗವಿಕಲರಾದ ಬೂಕನಕೆರೆ ಮಂಜು, ಶೇಖರ್, ಸೋಮ, ಮಂಗಳಮ್ಮ, ಮೊಗರಹಳ್ಳಿ ಸೀನಪ್ಪ, ಸರಸ್ವತಿ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಗಂಜಾಂ ಮಂಜು, ರಘು, ಕಿರಂಗೂರು ಪಾಪು ಇದ್ದರು. ಶಿರಸ್ತೇದಾರ್ ಬಸವರಾಜು ಮಾರ್ಗಮಧ್ಯೆ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.