ADVERTISEMENT

ಬೇಬಿಬೆಟ್ಟ: ಗಣಿಗಾರಿಕೆ ನಿಷೇಧಾಜ್ಞೆ ತೆರವುಗೊಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 8:34 IST
Last Updated 25 ಅಕ್ಟೋಬರ್ 2017, 8:34 IST

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಅಮೃತ ಮಹಲ್‌ ಕಾವಲ್‌ ಪ್ರದೇಶಕ್ಕೆ ಜಾರಿಗೊಳಿಸಿರುವ ನಿಷೇಧಾಜ್ಞೆ ಹಿಂಪಡೆಯುವಂತೆ ಗಣಿಮಾಲೀಕರು ಮತ್ತು ಕಾರ್ಮಿಕರು ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಹಾರೋಹಳ್ಳಿ ಬಳಿಯ ಎಪಿಎಂಸಿಗೆ ಸಚಿವ ಕೃಷ್ಣಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿದ ಗಣಿಮಾಲೀಕರು ಮತ್ತು ಕಾರ್ಮಿಕರು, ಗಣಿಗಾರಿಕೆ ಕೂಲಿಯಿಂದ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ.

ನಿಷೇಧಾಜ್ಞೆಯಿಂದ ಜೀವನ ಕಷ್ಟಕರವಾಗಿದೆ. ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಕಲ್ಲಿನ ಕಚ್ಚಾವಸ್ತುಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಕಾಮಗಾರಿಗಳಿಗೆ ತೊಡಕಾಗಿದೆ. ಗಣಿಗಾರಿಕೆ ರಾಜಧನವನ್ನು ಸರ್ಕಾರಕ್ಕೆ ಭರಿಸಲಾಗುತ್ತಿದೆ. ಹಾಗಾಗಿ, ನಿಷೇಧ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಪ್ಪ, ಸಾಧಕ– ಬಾಧಕಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ಸಂಸದ ಸಿ.ಎಸ್.ಪುಟ್ಟರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಧಮ್ಮ, ಸದಸ್ಯರಾದ ಅಲ್ಪಹಳ್ಳಿ ಗೋವಿಂದಯ್ಯ, ಸಿ.ಎಸ್.ಗೋಪಾಲಗೌಡ, ಪುರಸಭೆ ಅಧ್ಯಕ್ಷೆ ತಾಯಮ್ಮ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಶಿವಕುಮಾರ್‌, ಎಪಿಎಂಸಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.