ADVERTISEMENT

ಮಾಯಣ್ಣಗೌಡನ ಕೊಪ್ಪಲಿನ ತೀರದ ಸಮಸ್ಯೆಗಳು

ಎನ್.ಆರ್.ದೇವಾನಂದ್
Published 25 ಜೂನ್ 2014, 7:16 IST
Last Updated 25 ಜೂನ್ 2014, 7:16 IST

ನಾಗಮಂಗಲ: ಹೂಳು ತೆಗೆಯದ ಚರಂಡಿಗಳು, ನಿರ್ವಹಣೆ ಇಲ್ಲದ ಬೀದಿ ದೀಪಗಳು, ಡಾಂಬರು ಕಾಣದ ರಸ್ತೆ ಸೇರಿದಂತೆ ಹಲವು ಸಮಸ್ಯೆಗಳು ತಾಲ್ಲೂಕಿನ ಮಾಯಣ್ಣಗೌಡನ ಕೊಪ್ಪಲು ಪ್ರವೇಶಿಸುತ್ತಿದ್ದಂತೆಯೇ ಕಾಣುತ್ತವೆ.

ತಾಲ್ಲೂಕಿನ ಕಸಬಾ ಹೋಬಳಿಯ ಪಾಲಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಣ್ಣಗೌಡನ­ಕೊಪ್ಪಲು 75ಕ್ಕೂ ಅಧಿಕ ಮನೆಗಳಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಮೂಲ ಸೌಕರ್ಯಗಳ ಕೊರತೆಯು ಈ ಚಿಕ್ಕ ಗ್ರಾಮವನ್ನು ಕಾಡುತ್ತಿದೆ.

ಗ್ರಾಮವು ನಾಗಮಂಗಲ ಪಟ್ಟಣದ ಕೂಗಳತೆಯ ದೂರದಲ್ಲಿದೆ. ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ, ಗ್ರಾಮದಲ್ಲಿ ಉತ್ತಮ ರಸ್ತೆಗಳಿಲ್ಲ. ಕೆಲವೆಡೆ ಚರಂಡಿಗಳಿದ್ದರೂ, ಹೂಳು ತೆಗೆಯಿಸಿಲ್ಲ. ಬೀದಿ ದೀಪಗಳಿದ್ದರೂ ಹೊತ್ತಿಕೊಳ್ಳದ್ದರಿಂದ ಕತ್ತಲಿನಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಗ್ರಾಮಸ್ಥರ­ದ್ದಾಗಿದೆ.

ಹದಗೆಟ್ಟಿರುವ ರಸ್ತೆಗಳು: ಗ್ರಾಮದ ಬಹುತೇಕ ರಸ್ತೆಗಳು ಸರಿಯಾಗಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರಿನ ಹೊಂಡಗಳಂತೆ ಮಾರ್ಪಾಟಾಗುತ್ತವೆ. ಚಿಕ್ಕ–ಪುಟ್ಟ ರಸ್ತೆಗಳೂ ಹಾಳಾಗಿವೆ. ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಇದೆ.

ತುಂಬಿ ತುಳುಕುತ್ತಿರುವ ಅನೈರ್ಮಲ್ಯ: ಗ್ರಾಮದ ಸುತ್ತ–ಮುತ್ತಲು ಬರೀ ಕಸವೋ ಕಸ. ನೀರಿನ ಟ್ಯಾಂಕ್‌ ಸಮೀಪ ಅಳವಡಿಸಿರುವ ನಲ್ಲಿಗಳಿಂದ ಬರುವ ನೀರು ಹೊರ ಹೋಗಲು ಚರಂಡಿ ವ್ಯವಸ್ಥೆಯಿಲ್ಲ.

ಗ್ರಾಮದ ಕೆಲವು ಕಡೆಗಳಲ್ಲಿ ಚರಂಡಿಯನ್ನು ಹಳೆಯ ಕಾಲದಲ್ಲಿ ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಹೂಳು ತುಂಬಿಕೊಂಡಿವೆ. ನೀರು ಹರಿಯದೆ ಅಲ್ಲಿಯೇ ನಿಲ್ಲುವುದರಿಂದ ಶುಚಿತ್ವ ಕಾಣೆಯಾಗಿದೆ.

ಬೀದಿ ದೀಪಗಳೇ ಇಲ್ಲ: ಕೆಲ ಲೈಟು ಕಂಬಗಳಲ್ಲಿ ಬೀದಿ ದೀಪಗಳಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಇದ್ದರೂ, ಅವು ಹತ್ತುತ್ತಿಲ್ಲ. ಈ ಕುರಿತು ಹಲವಾರು ಬಾರಿಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ಮೂಲಸೌಕರ್ಯ ಒದಗಿಸುವಂತೆ ಕೆಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದೇವು. ಕೆಲವು ಕಾಮಗಾರಿ­ಗಳಲ್ಲಿ ಆದ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಝಾಕಿರ್ ಹುಸೇನ್‌.
‘ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಎಲ್ಲಾ ಚರಂಡಿಗಳ ಹೂಳು ತೆಗೆಸಿ ಶುಚಿಗೊಳಿಸಲಾಗುವುದು. ಆದ್ಯತೆ ಮೇರೆಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ­ಲಾಗುವುದು’ ಎನ್ನುತ್ತಾರೆ ಪಿಡಿಒ ತಿಮ್ಮಾಚಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.