ADVERTISEMENT

ಮುಂದುವರಿದ ಮಳೆ; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 9:26 IST
Last Updated 7 ಅಕ್ಟೋಬರ್ 2017, 9:26 IST
ಮಂಡ್ಯದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ವಿವಿ ರಸ್ತೆಯಲ್ಲಿ ಸಿಲುಕಿದ ಬೈಕ್‌ ಸವಾರರು (1ನೇ ಚಿತ್ರ) ಮಳವಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಿದ್ದ ಮಳೆಗೆ ಪಟ್ಟಣದ ಅಂಚೆ ಕಚೇರಿ ಆವರಣ ಜಲಾವೃತಗೊಂಡಿರುವುದು
ಮಂಡ್ಯದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ವಿವಿ ರಸ್ತೆಯಲ್ಲಿ ಸಿಲುಕಿದ ಬೈಕ್‌ ಸವಾರರು (1ನೇ ಚಿತ್ರ) ಮಳವಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಿದ್ದ ಮಳೆಗೆ ಪಟ್ಟಣದ ಅಂಚೆ ಕಚೇರಿ ಆವರಣ ಜಲಾವೃತಗೊಂಡಿರುವುದು   

ಮಂಡ್ಯ: ಶುಕ್ರವಾರ ಸಂಜೆ ಆರಂಭವಾದ ಮಳೆ ಗುಡುಗು, ಸಿಡಿಲು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಧಾರಾಕಾರ ಮಳೆಯಿಂದಾಗಿ ರಸ್ತೆಗಳು, ಚರಂಡಿಗಳು ತುಂಬಿ ಹರಿದವು. ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ನೀರು ನಿಂತ ಪರಿಣಾಮ ಕೆರೆಯಂತಾಗಿತ್ತು ನಗರದ ಪ್ರಮುಖ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೀರು ತುಂಬಿ ಹರಿಯಿತು.

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರಿಗೆ ಅಡ್ಡಿಯಾಯಿತು. ನೀರಿನ ಮೇಲೆ ವೇಗವಾಗಿ ತೆರಳುತ್ತಿದ್ದ ವಾಹನಗಳು ರಸ್ತೆಯಲ್ಲಿ ಕಾರಂಜಿಯನ್ನು ಸೃಷ್ಟಿಸಿದ್ದವು. ಸಂಜೆ ಮಳೆ ಸುರಿದ ಪರಿಣಾಮ ಶಾಲೆಯಿಂದ ಮನೆಗೆ ತೆರಳುವ ವಿದ್ಯಾರ್ಥಿಗಳು, ನೌಕರರು ಪರದಾಡಿದರು.

ತಮಿಳು ಕಾಲನಿ, ಅರ್ಕೇಶ್ವರ ಬಡಾವಣೆ ಹಾಗೂ ಹಾಲಹಳ್ಳಿ ಕೊಳೆಗೇರಿಯಲ್ಲಿ ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ಪರದಾಡಿದರು. ಮಣ್ಣಿನ ರಸ್ತೆಯಿಂದಾಗಿ ನೀರು ರಾಡಿಯಾಗಿತ್ತು. ಜನರು ತಿರುಗಾಡಲು ಪರದಾಡಿದರು.

ADVERTISEMENT

ರಸ್ತೆಯಲ್ಲಿ ನೀರು ನೀರು ನಿಂತಿದ್ದ ಕಾರಣ ರಸ್ತೆಯಲ್ಲಿರುವ ಗುಂಡಿಗಳು ತಿಳಿಯದೆ ವಾಹನ ಸವಾರರು ಗುಂಡಿಗಿಳಿದು ಸಮಸ್ಯೆ ಅನುಭವಿಸಿದರು. ನೂರು ಅಡಿ ರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಕಸದ ತೊಟ್ಟಿ ತೆರವುಗೊಳಿಸದ ಕಾರಣ ರಸ್ತೆಯಲ್ಲಿ ಕಸ ಚೆಲ್ಲಾಪಿಲ್ಲಿಲಯಾಗಿ ಬಿದ್ದಿತ್ತು.ರಸ್ತೆ ತುಂಬೆಲ್ಲಾ ದುರ್ವಾಸನೆ ಹರಡಿತ್ತು. ಧಾರಾಕಾರ ಮಳೆಯಿಂದಾಗಿ ಕೆಲವಡೆ ವಿದ್ಯುತ್‌ ಸ್ಥಗಿತಗೊಂಡಿತ್ತು. ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಮಳವಳ್ಳಿ: ಭಾರಿ ಮಳೆ
ಮಳವಳ್ಳಿ: ಶುಕ್ರವಾರ ಮಧ್ಯಾಹ್ನ ಸುರಿದ ಬಾರಿ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಮಧ್ಯಾಹ್ನ 3.30ರಲ್ಲಿ ಪ್ರಾರಂಭಗೊಂಡ ಮಳೆ 5 ಗಂಟೆವರೆಗೂ ಸುರಿಯಿತು. ರಸ್ತೆಗಳು ಜಲಾವೃತಗೊಂಡಿದ್ದು ಜನರು ಪರದಾಡಿದರು.

ನಂತರಾಂ ವೃತ್ತದಲ್ಲಿ ಚರಂಡಿ ನೀರು ತುಂಬಿ ರಸ್ತೆಗೆ ಹರಿದ ಪರಿಣಾಮ ವಾಹನ ಸವಾರರು ಹರಸಾಹಸ ಪಟ್ಟರು. ಅಂಚೆ ಕಚೇರಿ ಆವರಣ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣ ಜಲಾವೃತಗೊಂಡಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆದು ಹಾಗೂ ಕೊಡೆ ಹಿಡಿದು ಹೋಗುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.