ADVERTISEMENT

ಮೇಳಾಪುರ, ಬೆಳಗೊಳದಲ್ಲಿ ಮೈಸೂರಿಗೆ ನೀರು ಬಂದ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:05 IST
Last Updated 3 ಅಕ್ಟೋಬರ್ 2012, 19:05 IST

ಶ್ರೀರಂಗಪಟ್ಟಣ:  ಕಾವೇರಿ ಚಳವಳಿಯಲ್ಲಿ ಮೈಸೂರಿನ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ತಾಲ್ಲೂಕಿನ ಮೇಳಾಪುರ ಗ್ರಾಮಸ್ಥರು ಮೈಸೂರಿಗೆ ನೀರು ಸರಬರಾಜು ಮಾಡುವ ಕಾವೇರಿ 4ನೇ ಹಂತದ ನೀರು ಸರಬರಾಜು ಕೇಂದ್ರವನ್ನು ಬುಧವಾರ ಬಂದ್ ಮಾಡಿದರು.

ಮೇಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ ನೇತೃತ್ವದಲ್ಲಿ ಸಂಜೆ 5 ಗಂಟೆ ವೇಳೆಗೆ ನೀರೆತ್ತುವ ಕಾರ್ಯಾಗಾರದ ಬಳಿ ತೆರಳಿದ ಗ್ರಾಮಸ್ಥರು ನೀರು ಸರಬರಾಜು ಕೇಂದ್ರಕ್ಕೆ ಬೀಗ ಮುದ್ರೆ ಹಾಕಿದರು. ಮೈಸೂರು ಮೇಯರ್ ಸ್ಥಳಕ್ಕೆ ಬರಬೇಕು. ಚಳವಳಿಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಬೇಕು. ಅಲ್ಲಿಯವರೆಗೆ ಇಲ್ಲಿಂದ ನೀರು ಸರಬರಾಜಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷಣ, ಯಜಮಾನ್ ಪಾಪೇಗೌಡ, ಗಣೇಶ್, ಪ್ರದೀಪ್ ಇತರರು ಹೇಳಿದರು.

ತಾಲ್ಲೂಕಿನ ಬೆಳಗೊಳ ಪಂಪ್‌ಹೌಸ್ ಬಳಿ ಮೈಸೂರಿಗೆ ನೀರು ಸರಬರಾಜು ಮಾಡುವ ಕೇಂದ್ರವನ್ನು ಪಿ.ಹೊಸಹಳ್ಳಿ ಗ್ರಾಮಸ್ಥರು ಬುಧವಾರ ಬಂದ್ ಮಾಡಿಸಿದರು.

ಗ್ರಾಮದಿಂದ ಪಂಪ್‌ಹೌಸ್‌ವರೆಗೆ ಮೆರವಣಿಗೆಯಲ್ಲಿ ತೆರಳಿ ನೀರು ಸರಬರಾಜು ಕೇಂದ್ರದ ಸಿಬ್ಬಂದಿಯನ್ನು ಹೊರಕಳುಹಿಸಿ ಬೀಗ ಹಾಕಿದರು.  ತಾಲ್ಲೂಕು ಪಂಚಾಯಿತಿ ಸದಸ್ಯ ಸಜ್ಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ವಾಸು, ಕೃಷ್ಣಾನಂದ್, ಎಚ್.ಆರ್.ಮಹೇಶ್, ಕೃಷ್ಣಮೂರ್ತಿ, ಪೈ.ಪುಟ್ಟರಾಜು, ಸಿ.ಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.