ADVERTISEMENT

ಯುದ್ಧ ಬೇಡ; ಬುದ್ಧ ಬೇಕು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:45 IST
Last Updated 15 ಅಕ್ಟೋಬರ್ 2012, 5:45 IST

ಶ್ರೀರಂಗಪಟ್ಟಣ: ಅಮೆರಿಕಾ ಪ್ರೇರಿತವಾದ ಜಾಗತೀಕರಣದ ಪರಿಣಾಮ ದೇಶ ದೇಶಗಳ ನಡುವೆ ಅಪನಂಬಿಕೆ ಹೆಚ್ಚುತ್ತಿದ್ದು, ಯುದ್ಧದ ಹಾದಿ ತೆರೆದುಕೊಳ್ಳುತ್ತಿದೆ. ಮನುಕುಲದ ನಾಶಕ್ಕೆ ನಾಂದಿ ಹಾಡುವ ಯುದ್ಧಕ್ಕೆ ಬೆನ್ನು ತೋರಿಸಿ ಶಾಂತಿದೂತ ಬುದ್ಧನತ್ತ ಮುಖ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಮಹೇಶ್ಚಂದ್ರಗುರು ಹೇಳಿದರು.

ತಾಲ್ಲೂಕಿನ ಕೆ.ಶೆಟ್ಟಹಳ್ಳಿಯ ವಿನಯ ವನದಲ್ಲಿ 56ನೇ ಧಮ್ಮ ದೀಕ್ಷಾ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಬುದ್ಧ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬುದ್ಧ ಪೂರ್ವದಲ್ಲಿ ಸ್ತ್ರೀಯರು, ರೈತರು, ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿತ್ತು. ದೇವರ, ಧರ್ಮ, ಮೋಕ್ಷದ ಹೆಸರಿನಲ್ಲಿ ಶೋಷಣೆ ಅವ್ಯಾಹತವಾಗಿ ನಡೆಯುತ್ತಿತ್ತು. ಬುದ್ಧ ಅವತರಿಸಿದ ನಂತರ ವೈಚಾರಿಕತೆಯ ಕಿಡಿ ಪಸರಿಸಿ ಜನರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರು. ಮಾನವೀಯ ನೆಲೆಗಟ್ಟಿನ ಸಮಾಜಕ್ಕಾಗಿ ತುಡಿತ ಶುರುವಾಯಿತು. ಅಶೋಕ ಚಕ್ರವರ್ತಿಯ ನಂತರ ಬುದ್ಧ ಧಮ್ಮ ವನ್ನು ದೇಶ, ವಿದೇಶಗಳಲ್ಲಿ ಪ್ರಚುರಪಡಿಸಿದವರು ಡಾ.ಅಂಬೇಡ್ಕರ್. ಅವರ ಆಶಯದಂತೆ ಶೋಷಣೆ ಮುಕ್ತ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಬುದ್ಧ ಧರ್ಮ ಪರಿಹಾರ ಎಂಬುದನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದರು.

ರಾಜಗೃಹ ಬುದ್ಧ ವಿಹಾರದ ಭಂತೆ ವೀರ್ಯಶೀಲ ಮಾತನಾಡಿ, 3000 ಕ್ಕೂ ಹೆಚ್ಚು ಜಾತಿಗಳು ಅದಕ್ಕೂ ಮಿಕ್ಕ ದೇವರುಗಳು ಇವೆ. ಜಾತಿ ವ್ಯವಸ್ಥೆ ನಾಶಕ್ಕೆ ಬುದ್ಧ ಮಾರ್ಗವೇ ಪರಿಹಾರ. ಬುದ್ಧನ ಪಂಚಶೀಲಗಳನ್ನು ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಪ್ರೊ.ಕರಿಮುದ್ದೀನ್ ಮಾತನಾಡಿ, ಬುದ್ಧ ದೇವರು, ಆತ್ಮ, ಮೋಕ್ಷದ ಬಗ್ಗೆ ಮೌನ ವಹಿಸಿದ್ದ. ಎಲ್ಲರಲ್ಲಿ ಬುದ್ಧ ಪ್ರಜ್ಞೆ ಬೆಳೆಯಬೇಕು ಎಂಬ ಆಶಯ ಅವನಲ್ಲಿತ್ತು. ಜಗತ್ತಿನ ಶಿಖರದಂತಿದ್ದ ಬುದ್ಧ ಯಾವ ಕಾಲಕ್ಕೂ ಪ್ರಸ್ತುತ ವ್ಯಕ್ತಿ ಎಂದು ಬಣ್ಣಿಸಿದರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಪ್ರಾಧ್ಯಾಪಕ ಕೆ.ವಿ.ಅಯ್ಯಣ್ಣ ಮಾತನಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಬಿ.ಎಸ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಭಗವಾನ್ ಬುದ್ಧ ಸೇವಾ ಟ್ರಸ್ಟ್‌ನ ಮೋಹನದಾಸ್, ಬಸವರಾಜು, ವಿ.ಸುರೇಶ್, ಅಪ್ಪಾಜಿ, ಮರಳಾಗಾಲ ಸಿದ್ದರಾಜು ಇದ್ದರು. ವಿವೇಕಾನಂದ ಕಿಶೋರ ಕೇಂದ್ರದ ಮಕ್ಕ ಳಿಂದ ಯೋಗ ಪ್ರದರ್ಶನ ನಡೆಯಿತು.

ಚಿತ್ರ ಪ್ರದರ್ಶನ: ಧಮ್ಮ ದೀಕ್ಷಾ ದಿನಾಚರಣೆ ಅಂಗವಾಗಿ ವಿನಯ ವನದಲ್ಲಿ ಡಾ.ಅಂಬೇಡ್ಕರ್ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂವಿಧಾನ ರಚನೆ, ಕೇಂದ್ರ ಸಚಿವರಾಗಿ ಪ್ರಧಾನಿಗಳ ಜತೆ ನಡೆಸಿದ ಚರ್ಚೆ, ಶ್ರೀಲಂಕಾ ಪ್ರತಿನಿಧಿಗಳ ಜತೆ ಸಂವಾದ, ಬುದ್ಧ ಧರ್ಮ ಸ್ವೀಕಾರ, ರಾಜಗೃಹ ಗ್ರಂಥಾಲಯ, ಮಹಾಡ್ ಕೆರೆ ಸೇರಿದಂತೆ ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.