ADVERTISEMENT

`ರೇಷ್ಮೆ ಗ್ರಾಮ'ಕ್ಕೆ ಈಗ ಶುಕ್ರದೆಸೆ

ಗಣಂಗೂರು ನಂಜೇಗೌಡ
Published 19 ಡಿಸೆಂಬರ್ 2012, 6:35 IST
Last Updated 19 ಡಿಸೆಂಬರ್ 2012, 6:35 IST

ಶ್ರೀರಂಗಪಟ್ಟಣ: ಇಡೀ ತಾಲ್ಲೂಕಿನಲ್ಲಿಯೇ ಇದೊಂದು ವಿಶಿಷ್ಟ ಊರು. ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು; ಹೆಜ್ಜೆ ಹೆಜ್ಜೆಗೂ ನಿಮಗೆ ರೇಷ್ಮೆ ಗೂಡುಗಳೇ ಸಿಗುತ್ತವೆ. ರೇಷ್ಮೆ ಕೃಷಿಯಲ್ಲಿ ಜಿಲ್ಲೆಯಲ್ಲಿಯೇ ಹೆಸರು ಮಾಡಿದ ಈ ಗ್ರಾಮವನ್ನು `ರೇಷ್ಮೆ ಗ್ರಾಮ' ಎಂದು ಕರೆಯುವುದೂ ಇದೆ.

ಹೌದು. ತಡಗವಾಡಿ ಗ್ರಾಮಕ್ಕೆ ಬರುವ ಯಾರಿಗಾದರೂ ಅಚ್ಚರಿ ಎಣಿಸುತ್ತದೆ. ಕೋಮು ಸೌಹಾರ್ದಕ್ಕೆ ಹೆಸರಾದ `ಬಾಬಯ್ಯ ಹಬ್ಬ' ಹಾಗೂ `ಬ್ಯಾಟಗಾರ ಪದ್ಧತಿ'ಯಿಂದ ಮನೆಮಾತಾಗಿರುವ ಈ ಗ್ರಾಮ ರೇಷ್ಮೆ ಬೆಳೆಯುವಲ್ಲಿಯೂ ಮುಂಚೂಣಿಯಲ್ಲಿದೆ. ರೇಷ್ಮೆ ಬೆಳೆಗಾರರಿಗೆ ಈಗ ಶುಕ್ರದೆಸೆ ಆರಂಭವಾಗಿದೆ.

ತಾಲ್ಲೂಕಿನಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ಗ್ರಾಮ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಊರಿನ ರೈತರು ಬತ್ತ, ರಾಗಿಯ ಜತೆಗೆ ವಾಣಿಜ್ಯ ಬೆಳೆಯಾಗಿ ರೆಷ್ಮೆಯನ್ನು ಅವಲಂಬಿಸಿದ್ದಾರೆ. ಸುಮಾರು ಸಾವಿರ ಮನೆಗಳ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ರೇಷ್ಮೆಗೂಡು ಉತ್ಪಾದನೆಯಲ್ಲಿ ತೊಡಗಿವೆ. ಸಾಮಾನ್ಯ ತಳಿಯಾದ ಸಿಬಿ ಗೋಲ್ಡ್ ರೇಷ್ಮೆಗೂಡು ಇಲ್ಲಿ ಹೆಚ್ಚು ಉತ್ಪಾದನೆಯಾಗುತ್ತದೆ.

ಹೈಬ್ರಿಡ್ ತಳಿಗಳಾದ ಸಿಎಸ್‌ಆರ್ 2/4 ಹಾಗೂ ಎಫ್‌ಸಿ1-ಎಫ್‌ಸಿ 2 ತಳಿಗಳನ್ನೂ ಬೆಯಲಾಗುತ್ತಿದೆ. ಕೆಲವು ರೈತರು ಬಿತ್ತನೆ ಗೂಡು ಎಂದು ಹೇಳಲಾಗುವ ಸಿಎಸ್‌ಆರ್-2 ತಳಿಯನ್ನೂ ಬೆಳೆಯುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಇದೆ.

ಹೈಬ್ರಿಡ್ ತಳಿಯ ರೇಷ್ಮೆಗೂಡು ಕೆಜಿ ಒಂದಕ್ಕೆ ರೂ. 250 ರಿಂದ 300 ರವರೆಗೆ ಮಾರಾಟವಾಗುತ್ತಿದೆ. ಸಾಮಾನ್ಯ ಸಿಬಿ ಗೋಲ್ಡ್ ತಳಿಗೆ ರೂ. 260 ರವರೆಗೆ ಬೆಲೆ ಇದೆ. ಹಾಗಾಗಿ ರೇಷ್ಮೆ ಬೆಳೆಗಾರರು ಖುಷಿಯಲ್ಲಿದ್ದಾರೆ.

ಮರಿ ಸಾಕುವ ಪದ್ಧತಿ: ಒಂದು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆದರೆ 250 ರೇಷ್ಮೆ ಮೊಟ್ಟೆ ಸಾಕಣೆ ಮಾಡಬಹುದು. 100 ರೇಷ್ಮೆ ಮೊಟ್ಟೆ ಸಾಕಣೆ ಮಾಡುವ ರೈತ 60ರಿಂದ 75 ಕೆ.ಜಿ.ಯಷ್ಟು ಗೂಡು ಉತ್ಪಾದಿಸುತ್ತಾರೆ. ಇತ್ತೀಚೆಗೆ ಮೊಟ್ಟೆ ಸಾಕುವ ಬದಲು ಮರಿಗಳನ್ನೇ ಸಾಕಣೆ ಮಾಡುವ ಪದ್ಧತಿ ಹೆಚ್ಚಾಗಿದ್ದು ರೈತರು ವರ್ಷದಲ್ಲಿ 6 ಬೆಳೆ ತೆಗೆಯುತ್ತಿದ್ದಾರೆ. ತಡಗವಾಡಿಯಲ್ಲಿ ಉತ್ಪಾದನೆಯಾಗುವ ರೇಷ್ಮೆ ಗೂಡನ್ನು ರಾಮನಗರ ಹಾಗೂ ಕೊಳ್ಳೇಗಾಲ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ರೈತರಿಗೆ ಸರ್ಕಾರದಿಂದ ಆರ್ಥಿಕ ನೆರವು ಕೂಡ ಸಿಗುತ್ತಿದೆ. ಒಂದೂವರೆ ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯುವ ರೈತರಿಗೆ ರೂ. 2 ಲಕ್ಷದವೆರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಇದರಲ್ಲಿ ರೂ. 75 ಸಾವಿರ ಸಬ್ಸಿಡಿ ಇರುತ್ತದೆ. 600 ಚದರ ಅಡಿ ರೇಷ್ಮೆ ಸಾಕಣೆ ಮನೆ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ರೂ. 50 ಸಾವಿರ ಸಬ್ಸಿಡಿ ನೀಡುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ನಾಟಿ ಮಾಡಿದರೆ ಅಂತಹ ರೈತರಿಗೆ ರೂ. 5 ಸಾವಿರ ಸಹಾಯಧನ ಪಡೆಯಬಹುದು. ಹನಿ ನೀರಾವರಿ ಅಳವಡಿಸಿಕೊಳ್ಳುವ ಪರಿಶಿಷ್ಟ ವರ್ಗದ ರೈತರಿಗೆ ಶೇ.90 ರಿಯಾಯಿತಿ ಹಾಗೂ ಇತರ ವರ್ಗದ ರೈತರಿಗೆ ಶೇ. 70ರಷ್ಟು ರಿಯಾಯಿತಿ ಸೌಲಭ್ಯವೂ ಇದೆ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶಕೀಲ್ ಅಹಮದ್ ಹೇಳಿದ್ದಾರೆ.

ಸರ್ಕಾರ ರೇಷ್ಮೆ ಬೆಳೆಗಾರರಿಗೆ, ಒಂದು ಕೆ.ಜಿ. ರೇಷ್ಮೆ ಗೂಡಿಗೆ ರೂ. 10 ಬೋನಸ್ ಹಣ ನೀಡುತ್ತದೆ. ಈ ಹಣವನ್ನು ಮಾರಾಟ ಮಾಡುವ ದಿನವೇ ರೈತರಿಗೆ ಪಾವತಿಸಬೇಕು. ರೇಷ್ಮೆ ಇಲಾಖೆಯ ಮೂಲಕ ಬೋನಸ್ ಹಣ ನೀಡುತ್ತಿದ್ದು ಷರತ್ತುಗಳು ಹೆಚ್ಚಾಗಿರುವುದರಿಂದ ಹಣ ಪಡೆಯಲು ಪರದಾಡುವಂತಾಗಿದೆ ಎಂದು ರೇಷ್ಮೆ ಬೆಳೆಗಾರರು ಸಮಸ್ಯೆ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.