ADVERTISEMENT

ವೈಭವದ ವಿಜಯದಶಮಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 4:30 IST
Last Updated 7 ಅಕ್ಟೋಬರ್ 2011, 4:30 IST

ಕೃಷ್ಣರಾಜಪೇಟೆ: ವಿಜಯದಶಮಿ ಅಂಗವಾಗಿ ತಾಲ್ಲೂಕಿನ ಪುಣ್ಯಕ್ಷೇತ್ರ ಕಾಪನಹಳ್ಳಿ ಗವಿಮಠದಲ್ಲಿ ಗುರುವಾರ ನಡೆದ ಸ್ವತಂತ್ರ ಸಿದ್ದಲಿಂಗ ಯತಿಗಳ ಉಯ್ಯಾಲೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.

ಇಲ್ಲಿನ ಶೂನ್ಯ ಸಿಂಹಾಸನದ ಪೀಠಾಧ್ಯಕ್ಷ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಶಮೀವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಿದ್ದಲಿಂಗ ಯತಿಗಳ ಗದ್ದುಗೆಗೆ, ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಮೊದಲ ಬಾರಿಗೆ ನೂತನವಾಗಿ ನಿರ್ಮಿಸಲಾದ ಉಯ್ಯಾಲೆಯಲ್ಲಿ ಸಿದ್ದಲಿಂಗೇಶ್ವರರ ಉತ್ಸವಮೂರ್ತಿಯನ್ನು ಕುಳ್ಳರಿಸಿ, ಉಯ್ಯಾಲೋತ್ಸವ ಸೇವಾ ಕೈಂಕರ್ಯ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಸ್ವಾಮೀಜಿ ಮನುಷ್ಯರು ದೈನಂದಿನ ಜಂಜಾಟಗಳ ನಡುವೆಯೂ ಇತರರಿಗೆ ನೆರವಾಗುವ ಮೂಲಕ, ಅನ್ಯರಿಗೆ ಕೇಡೆಣಿಸದೆ ಇರುವ ಮೂಲಕ ಭಗವಂತ ನನ್ನು ಕಾಣುವ ಪ್ರಯತ್ನ ಮಾಡಬೇಕು. ಸಮಾಜಕ್ಕೆ ತಮ್ಮಿಂದ ಸಾಧ್ಯವಾದ ಕಾಣಿಕೆ ನೀಡಬೇಕು ಎಂದರು.

ಮಳವಳ್ಳಿ ತಾಲ್ಲೂಕಿನ ದೇವಪಟ್ಟಣ ಮಠದ ಸ್ವಾಮೀಜಿ ಹಾಗೂ ಕನಕಪುರ ತಾಲ್ಲೂಕಿನ ನೇರಲಹಟ್ಟಿ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ತೋಟಪ್ಪಶೆಟ್ಟಿ, ದಾನಿ ಗಳಾದ ಪದ್ಮಾ ಚಂದ್ರ ಶೇಖರ್, ಪದ್ಮಿನಿ ದೇವೇ ಗೌಡ, ತಾ.ಪಂ. ಮಾಜಿ ಅಧ್ಯಕ್ಷ ಜವರಾಯಿ ಗೌಡ, ಮುಖಂಡರಾದ ಕೆ.ಆರ್. ನೀಲಕಂಠ, ಪುರ ಮಂಜುನಾಥ್, ಸೋಮನಾಥಪುರ ಚನ್ನಬಸಪ್ಪ, ಹೊಸಹೊಳಲು ರಘು ಇತರರು ಇದ್ದರು.  

ಮದ್ದೂರು ವರದಿ: ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಬುಧವಾರ ವಿಜಯದಶಮಿ ಅಂಗವಾಗಿ ಭಾರತೀಯ ಕಿಸಾನ್ ಸಂಘದ ಆಶ್ರಯದಲ್ಲಿ ಬಲರಾಮ ಜಯಂತಿ ಹಾಗೂ ಗೋಪೂಜಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಆಂಜನೇಯಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿದ ಕಿಸಾನ್ ಸಂಘದ ಕಾರ್ಯಕರ್ತರು, ಗೋವುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಾರತೀಯ ಕಿಸಾನ್ ಸಂಘದ ರಾಜ್ಯ ಕೋಶಾಧ್ಯಕ್ಷ ಕೆ.ಜಿ. ಅನಂತರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಾದಿ ಕಾಲದಿಂದ ಗೋಮಾತೆಗೆ ಗೌರವ ನೀಡಲಾಗಿದೆ. ಗೋವುಗಳಿಂದ ದೊರಕುವ ಪಂಚಗವ್ಯ ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಸ್.ಪಿ. ಶಿವಲಿಂಗೇಗೌಡ ಮಾತನಾಡಿ, ಸಾವಯವ ಕೃಷಿಗೆ ಗೋವುಗಳ ಸಾಕಾಣಿಕೆ ಮೂಲಾಧಾರವಾಗಿದೆ. ಗೋವುಗಳಿಂದ ದೊರಕುವ ಗಂಜಲ, ಸಗಣಿ ಯಿಂದ ಜೀವಾಮೃತ ತಯಾರಿಸಬಹುದಾಗಿದೆ. ಇದರಿಂದ ಕಡಿಮೆ ವೆಚ್ಚ ದಲ್ಲಿ ಕೃಷಿ ಕೈಗೊಂಡು ಅತ್ಯಧಿಕ ಲಾಭ ಪಡೆಯಬ ಹುದು. ಹೀಗಾಗಿ ಸರ್ಕಾರ ಗೋರಕ್ಷಣೆ ಮೂಲಕ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದರು.

ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಎಚ್. ಕೆ. ಅಶ್ವಥ್, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ರಾಮಕೃಷ್ಣ, ನಾಗಣ್ಣ, ರಮೇಶ್, ಚಂದ್ರಶೇಖರ್, ಎಂ.ಆರ್. ಕೃಷ್ಣ, ಸೋಮಲತಾ, ದಿವ್ಯ, ಎಂ.ಡಿ. ರೇಖಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.