ಶ್ರೀರಂಗಪಟ್ಟಣ: ತಾಲ್ಲೂಕಿನ ಗಡಿಭಾಗದ ಗ್ರಾಮ ಹೆಬ್ಬಾಡಿ ಹುಂಡಿಯಲ್ಲಿ ಒಂದು ವಾರದಿಂದ ಜಾಂಡೀಸ್ ಪ್ರಕರಣಗಳು ಹೆಚ್ಚುತ್ತಿದ್ದು, ಮಂಗಳವಾರ ಶಾಸಕ ರಮೇಶ ಬಂಡಿಸಿದ್ದೇಗೌಡ, ಡಿಎಚ್‌ಒ ಮರೀಗೌಡ ಇತರರು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು.
ಗ್ರಾಮದ 20ಕ್ಕೂ ಹೆಚ್ಚು ಮಂದಿಗೆ ಜಾಂಡೀಸ್ ತಗುಲಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಜಾಥಾ ನಡೆಯಿತು. ಜಾಂಡೀಸ್‌ನಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಚಿಕಿತ್ಸೆ ನೀಡಿದರು. ಶುದ್ಧೀಕರಿಸದ ನೀರು ಕುಡಿಯುತ್ತಿರುವುದರಿಂದ ಜಾಂಡೀಸ್ ಹರಡುತ್ತಿದೆ. ಸೋಸಿ ಕಾಯಿಸಿದ ನೀರು ಕುಡಿಯಬೇಕು ಎಂದು ಶಾಸಕರು ಮತ್ತು ಅಧಿಕಾರಿಗಳು ಹೇಳಿದರು. ಮನೆ ಮನೆಗೆ ತೆರಳಿ ಅರಿವು ಮೂಡಿಸಲಾಯಿತು.
ಮೈಸೂರಿಗೆ ನೀರು ಸರಬರಾಜು ಮಾಡುವ ಮೇಳಾಪುರ ಘಟಕದಿಂದ ಹೆಬ್ಬಾಡಿಹುಂಡಿ ಗ್ರಾಮಕ್ಕೆ ನೀರಿನ ಸಂಪರ್ಕ ಪಡೆಯಲಾಗಿದೆ. ಮೈಸೂರಿಗೆ ಕೊಂಡೊಯ್ಯುವ ಕಾವೇರಿ ನದಿಯ ನೀರನ್ನು ಮಾರ್ಗಮಧ್ಯೆ ಇರುವ ಹೆಬ್ಬಾಡಿಹುಂಡಿ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಆದರೆ ಗ್ರಾಮಸ್ಥರು ಶುದ್ಧೀಕರಿಸದೆ ನೀರು ಕುಡಿಯುತ್ತಿದ್ದಾರೆ.
ಬೇಸಿಗೆಯಲ್ಲಿ ಸಹಜವಾಗಿ ಜಾಂಡೀಸ್, ಟೈಫಾಯ್ಡ ಇತರ ನೀರಿನಿಂದ ಬರುವ ಕಾಯಿಲೆಗಳು ಹರಡುತ್ತವೆ. ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು. ಪ್ರತಿ ಗ್ರಾಮದ ಕುಡಿಯುವ ನೀರಿನ ಮೂಲ ಖಚಿತಪಡಿಸಿಕೊಂಡು ಪರೀಕ್ಷೆಗೆ ಒಳಪಡಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದರು.
ಡಿಎಚ್‌ಒ ಮರೀಗೌಡ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಕುಡಿಯಬೇಕು ಎಂಬ ತಿಳಿವಳಿಕೆ ಇರುವುದಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಜಾಗೃತಿ ಮೂಡಿಸಬೇಕು. ರೋಗ ಹರಡಿದ ಮೇಲೆ ಸಮಸ್ಯೆ ಎದುರಿಸುವ ಬದಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ, ತಾ.ಪಂ. ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ಪಿಡಿಒ ಕೆ.ಕಾರ್ತಿಕ್, ಗ್ರಾ.ಪಂ. ಅಧ್ಯಕ್ಷ ಸದಾಶಿವ, ಸದಸ್ಯ ರಾಜು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.