ADVERTISEMENT

ಸಮಗ್ರ ಕೃಷಿಗೆ ಒತ್ತು ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 7:30 IST
Last Updated 3 ಸೆಪ್ಟೆಂಬರ್ 2011, 7:30 IST

ಮಂಡ್ಯ: ರೈತರು ಸಮಗ್ರ ಕೃಷಿ, ಮಿಶ್ರ ಬೆಳೆಗೆ ಒತ್ತು ನೀಡುವ ಮೂಲಕ ಹೆಚ್ಚಿನ ಆದಾಯ ಗಳಿಸುವತ್ತ ಚಿಂತನೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಯರಾಂ ಕೃಷಿಕರಿಗೆ ಸಲಹೆ ನೀಡಿದರು.

ಒಂದೇ ಬೆಳೆಗೆ ಬದ್ಧರಾದರೆ ನಷ್ಟದ ಸಾಧ್ಯತೆಗಳು ಹೆಚ್ಚು. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ತೆಂಗು, ಬಾಳೆ, ತೋಟಗಾರಿಕೆ ಬೆಳೆಗಳು, ಹೈನುಗಾರಿಕೆ, ಜೇನು ಸಾಕಣೆ ಮತ್ತಿತರ ಅಂಶಗಳತ್ತಲೂ ಚಿಂತನೆ ನಡೆಸಬಹುದು ಎಂದರು.

ತೆಂಗು ಅಭಿವೃದ್ಧಿ ಮಂಡಳಿ ಮತ್ತು ಮಂಡ್ಯ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಡ್ಯ ತಾಲ್ಲೂಕು ಲೋಕಸರ ಸಮೀಪದ ಮಂಡಳಿಯ ಫಾರಂನಲ್ಲಿ ನಡೆದ ವಿಶ್ವ ತೆಂಗು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ಭಾಗದಲ್ಲಿ ತೆಂಗಿನ ಎಣ್ಣೆಯನ್ನು ಖಾದ್ಯದಲ್ಲಿಯೂ ಬಳಕೆ ಮಾಡುತ್ತಾರೆ. ತೆಂಗು ಉಪ ಉತ್ನನ್ನಗಳಿಗೂ ಹೆಚ್ಚಿನ ಬೇಡಿಕೆ ಇದ್ದು, ತೆಂಗು ಬೆಳೆಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂದರು.

ಎನರ್ಜಿ ಫುಡ್ ಇಂಡಸ್ಟ್ರೀಸ್ ಸಿದ್ಧಪಡಿಸಿರುವ ಎಳನೀರು ತೆಗೆಯುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಡೀನ್ ಡಾ. ವಿ.ಟಿ.ಸಣ್ಣವೀರಪ್ಪನವರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಸುಜ್ಞಾನಮೂರ್ತಿ, ತೆಂಗು ಅಭಿವೃದ್ಧಿ ಮಂಡಳಿಯ ಉಪ ನಿರ್ದೇಶಕ ವಿಜಯಕುಮಾರ್ ಹಳ್ಳಿಕೇರಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ನರೇಂದ್ರಬಾಬು, ಸಹಾಯಕ ನಿರ್ದೇಶಕಿ ಶಾಂತಾ, ಡಿಎಸ್‌ಪಿ ಫಾರಂನ ವ್ಯವಸ್ಥಾಪಕ ಎಂ.ಕೆ.ಸಿಂಗ್ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.