ಪಾಂಡವಪುರ: ಮಲೇರಿಯಾದ ತವರೂರಾಗಿದ್ದ ತಾಲ್ಲೂಕಿನ ಸಣಬದ ಕೊಪ್ಪಲು ಗ್ರಾಮದಲ್ಲಿ ಮತ್ತೆ ಕಾಯಿಲೆಗಳು ಮರುಕಳಿಸುವ ಆತಂಕವನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.
ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಜನಸಂಖ್ಯೆ ಸಾವಿರ ದಾಟಿದೆ. ಇಲ್ಲಿ ಮೂಲ ಸೌಕರ್ಯವಿಲ್ಲ. ಹೀಗಾಗಿ, ಗ್ರಾಮವು ಸೊಳ್ಳೆಗಳ ವಾಸಸ್ಥಾನವಾಗಿ ಪರಿವರ್ತನೆಯಾಗಿದೆ.
ಗ್ರಾಮವು, ಪ್ರಸಿದ್ದ ತೊಣ್ಣೂರು ಕೆರೆಯ ಹಿನ್ನೀರಿನ ದಡದಲ್ಲಿದೆ. ಜನಪ್ರತಿನಿಧಿಗಳು ಮತ್ತು ಆಧಿಕಾರಿಗಳು ಗ್ರಾಮದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಗ್ರಾಮದ ಬಹುತೇಕ ಚರಂಡಿಗಳು ದುರಸ್ತಿ ಕಾಣಬೇಕಿದೆ. ಬೀದಿಗಳಲ್ಲಿ ಗುಂಡಿಬಿದ್ದ ರಸ್ತೆಗಳ ಡಾಂಬರೀಕರಣ ಆಗಬೇಕು. ಶಾಲೆಗೆ ಕಂಪೌಂಡ್ ಇಲ್ಲದಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಕಂಪೌಂಡ್ ನಿರ್ಮಿಸಬೇಕು. ದೇವಸ್ಥಾನದ ಹಿಂಭಾಗದ ಸ್ಥಳವನ್ನು ಸಮತಟ್ಟು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
2011-12ನೇ ಸಾಲಿನಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮದ ಅರಳಿಮರದಿಂದ ಕೆರೆಯವರೆಗೆ ರಸ್ತೆಯ ಅಭಿವೃದ್ಧಿ ಹಾಗೂ ಕೊಳಚೆ ನೀರು ಹರಿದು ಹೋಗಲು ಬಸಿಗಾಲುವೆಯನ್ನು ರೂ.90 ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರಸ್ತೆ ಹಾಳಾಗಿದ್ದು, ಬಸಿಗಾಲುವೆ ಮುಚ್ಚಿ ಹೋಗಿದೆ.
ಕುಡಿಯುವ ನೀರಿನ ಪೂರೈಕೆ ಪರವಾಗಿಲ್ಲ. ವಿದ್ಯುತ್ ಸಮಸ್ಯೆ ಇರದಿದ್ದರೆ ನೀರು ಸಿಗುತ್ತದೆ. ಅದನ್ನು ಬಿಟ್ಟರೆ ಉಳಿದ ಮೂಲ ಸೌಕರ್ಯಗಳಿಲ್ಲ ಎಂದು ದೂರುತ್ತಾರೆ ಅವರು.
ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆ ಇಲ್ಲ. ಹೀಗಾಗಿ ಅವರು ಒಂದು ಕಿ.ಮೀ. ನಷ್ಟು ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಗ್ರಾಮದ ಸಮಗ್ರ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಸೀತಾರಾಮ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.