ಮಂಡ್ಯ: ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸರಗಳ್ಳತನ ಹಾಗೂ ಡಕಾಯಿತಿ ಮಾಡುತ್ತಿದ್ದ ಕಳ್ಳರ ತಂಡವನ್ನು ಬಂಧಿಸಿರುವ ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳ ಸಿಬ್ಬಂದಿಯು, ಅವರಿಂದ 17 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ ಬೊರಸೆ, ಮಂಡ್ಯದ ಪೇಟೆ ಬೀದಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೈಸೂರಿನ ಹರೀಶ್ ಎಂಬುವವನನ್ನು ವಿಚಾರಣೆಗೆ ಒಳ ಒಡಿಸಿದಾಗ 17 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಮಂಡ್ಯ ಪೂರ್ವ ಹಾಗೂ ಪಶ್ಚಿಮ ಠಾಣೆಯ 10, ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂರು, ಮೈಸೂರಿನ ಸರಸ್ವತಿಪುರಂ ವ್ಯಾಪ್ತಿಯ ಎರಡು, ಟಿ. ನರಸೀಪುರ ಠಾಣಾ ವ್ಯಾಪ್ತಿಯ ಒಂದು ಹಾಗೂ ಕೊಳ್ಳೇಗಾಲ ಠಾಣಾ ವ್ಯಾಪ್ತಿಯಲ್ಲಿ ಒಂದು ಕಳ್ಳತನ ಮಾಡಿರುವುದು ಗೊತ್ತಾಗಿದೆ ಎಂದು ಹೇಳಿದರು.
ಹರೀಶ್ ನಿಂಗಯ್ಯ, ವಿನಯ್ ಶಂಕರ್, ಶಶಿಧರ್ ರಾಮಣ್ಣ, ಪ್ರಕಾಶ್ ಶ್ರೀನಿವಾಸ್ ಆರೋಪಿಗಳಾಗಿದ್ದು, ಎಲ್ಲರೂ ಮೈಸೂರು ನಗರದವರಾಗಿದ್ದಾರೆ.
ಪ್ರಕರಣ ಪತ್ತೆ ಹಚ್ಚುವಲ್ಲಿ ಡಿವೈಎಸ್‌ಪಿ ಶೋಭಾರಾಣಿ, ಸಿಪಿಐ ಶ್ರೀನಿವಾಸ್, ಪಿಎಸ್‌ಐ ಗಳಾದ ಸಿದ್ದರಾಜು, ಜೆ,ಎಸ್, ನಿರಂಜನ, ಲಕ್ಷ್ಮೀನಾರಾಯಣ, ಎಎಸ್‌ಐ ಸಿ.ಕೆ. ಪುಟ್ಟಸ್ವಾಮಿ, ನಾರಾಯಣ, ನಿಂಗಣ್ಣ, ಟಿ.ಲಿಂಗರಾಜು, ಅರ್ಕೇಶ್, ಅಣ್ಣೇಗೌಡ, ನಟರಾಜು, ಇರ್ಫಾನ್‌ಪಾಷಾ, ಪುಟ್ಟಸ್ವಾಮಿ, ಯೋಗೇಶ್‌ಕುಮಾರ್, ಬಲರಾಮೇಗೌಡ, ಶ್ರೀನಿವಾಸ್ ಭಾಗವಹಿಸಿದ್ದು, ತಂಡಕ್ಕೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದರು.
ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಕೆಲವು ಲೋಪಗಳಿದ್ದದ್ದು ಕಂಡು ಬಂದಿತ್ತು. ಅದನ್ನು ಸರಿಪಡಿಸಿ, ವ್ಯಾಪಕ ದಾಳಿ ನಡೆಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ಮಾಡಲು ಬಿಡುವುದಿಲ್ಲ. ಎಲ್ಲಿಯೇ ಅಕ್ರಮ ನಡೆಯುತ್ತಿರುವುದು ಕಂಡು ಬಂದರೆ, ಪೊಲೀಸರಿಗೆ ಮಾಹಿತಿ ನೀಡಬೇಕು. ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯಾಗಿ ಪರಿವರ್ತಿಸಲು 10 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಯಾವುದೇ ಭಯವಿಲ್ಲದೇ ಜನರು ಠಾಣೆಗಳಿಗೆ ತೆರಳಿ ದೂರು ಸಲ್ಲಿಸಬೇಕು. ಅಧಿಕಾರಿಗಳು ವರ್ತನೆ ಸರಿಯಾಗಿರದಿದ್ದರೆ ತಮಗೇ ದೂರು ನೀಡುವಂತೆ ತಿಳಿಸಿದರು.
ಮಂಡ್ಯ ನಗರದ ಸಂಚಾರ ಒತ್ತಡ ನಿವಾರಣೆಗೆ ಬೈಪಾಸ್ ಅಥವಾ ಫ್ಲೈಓವರ್ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಗರದ ವಿವಿಧೆಡೆ ವಾಹನ ನಿಲ್ಲಿಸುವ ಖಾಸಗಿ ವಾಹನ ಮಾಲೀಕರ ಸಭೆಯನ್ನು ಕರೆದು ಚರ್ಚೆ ನಡೆಸಲಾಗುವುದು ಎಂದರು.
ಪೇಟೆ ಬೀದಿಯ ಸಂಚಾರ ಒತ್ತಡ ನಿವಾರಣೆಗೂ ಕ್ರಮಕೈಗೊಳ್ಳಲಾಗುವುದು. ಹೆಚ್ಚುವರಿ ಪೊಲೀಸ್ ವರಿಷ್ಠ ಎ.ಎನ್. ರಾಜಣ್ಣ, ಡಿವೈಎಸ್‌ಪಿ ಶೋಭಾರಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.