ADVERTISEMENT

ಸಿಡಿಜಾತ್ರೆ: ಹುಲಿಗಿಡದಲ್ಲಿ ಮೂಡಿದ ಅಮ್ಮ..!

ನಾಗಮಂಗಲ: ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ದಿನಗಣನೆ ಆರಂಭ

ಎನ್.ಆರ್.ದೇವಾನಂದ್
Published 3 ಏಪ್ರಿಲ್ 2015, 5:14 IST
Last Updated 3 ಏಪ್ರಿಲ್ 2015, 5:14 IST

ನಾಗಮಂಗಲ: ತಾಲ್ಲೂಕಿನಾದ್ಯಂತ ಅತಿಹೆಚ್ಚು ಒಕ್ಕಲು ಗ್ರಾಮಗಳನ್ನು ಹೊಂದಿದ್ದು, ಏಕೈಕ ಸಿಡಿಜಾತ್ರೆ ಆಚರಿಸುವ ಆದಿಶಕ್ತಿ ಹುಲಿಕೆರೆ ಅಮ್ಮನವರ ಭಕ್ತಿ ಭಾವೈಕ್ಯದ ಸಿಂಚನದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಏ. 7ರಂದು ನಡೆಯುವ ಸಿಡಿಬಂಡಿ, ಕನ್ನಾಕರಡಿ, ಕೊಂಡೋತ್ಸವ ಮತ್ತು ಅಮ್ಮನವರ ಮುತ್ತಿನಪಲ್ಲಕ್ಕಿ ಉತ್ಸವದ ಮೆರವಣಿಗೆಗಾಗಿ ಹಬ್ಬದ ಕೇಂದ್ರ ಸ್ಥಾನ ಹುಲಿಕೆರೆ ಸೇರಿದಂತೆ ಸಂಬಂಧಿಸಿದ 24 ಗ್ರಾಮಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕ್ಷೇತ್ರಕ್ಕೆ ಹುಲಿಕೆರೆ ಎಂದು ನಾಮಕರಣವಾಗುವಲ್ಲಿ ಐತಿಹ್ಯವಿದೆ. ಕ್ಷೇತ್ರದಲ್ಲಿ ಇರುವ ಕೆರೆಯ ಪಕ್ಕದಲ್ಲಿ ಹುಲಿಗಿಡವೊಂದರಿಂದ ಒಡೆದು ಮೂಡಿದ್ದ ಆದಿಶಕ್ತಿಯ ಪ್ರತೀಕದ ಶಿಲೆ ಇದೆ. ಕೆರೆಯ ಪಕ್ಕದಲ್ಲಿದ್ದ ಹುಲಿಗಿಡದಲ್ಲಿ ಮೂಡಿದ ಶಕ್ತಿಯನ್ನು ಹುಲಿಕೆರೆ ಅಮ್ಮ ಎಂದು ಕರೆದಾಗ, ಅನಾದಿಕಾಲ ದಿಂದಲೂ ತರಗು ಗುಡಿಸಿ ಮನೆಮಾಡಿಕೊಂಡು ಇದ್ದ ಕೆಲ ಕುಟುಂಬಗಳ ಸ್ಥಳವನ್ನು ‘ಹುಲಿಕೆರೆ’ ಎಂದು ಕರೆಯಲಾಯಿತು ಎಂಬುದು ಗ್ರಾಮದ ವಯೋವೃದ್ಧರ ಮಾತು.

ಕೋಟ್ಯಂತರ ರೂಪಾಯಿ ಖರ್ಚುಮಾಡಿ ನೂತನ ದೇವಾಲಯವನ್ನು ಈಚೆಗೆ ನಿರ್ಮಿಸಿ, ಗರ್ಭಗುಡಿಯ ಸುತ್ತ ಕಾಂಕ್ರೀಟ್‌ನಿಂದ ಫ್ಲಾಟ್‌ಫಾರಂ ಮಾಡಿದ್ದರೂ, ಗರ್ಭಗುಡಿಯ ಹಿಂಭಾಗ ಕಾಂಕ್ರೀಟ್ ಮಧ್ಯದಲ್ಲಿ ಹುಲಿಗಿಡವೊಂದು ಹುಟ್ಟಿ ಬೆಳೆಯುತ್ತಿರುವುದು ಇಲ್ಲಿಯ ಜನರ ಧಾರ್ಮಿಕ ಭಾವನೆಗಳ ನಂಬಿಕೆಗೆ ಪುಷ್ಟಿ ನೀಡಿದಂತಿದೆ.

ಈ ದೇವಾಲಯಕ್ಕೆ ಹುಲಿಕೆರೆ, ಗೌಡರಹಳ್ಳಿ, ನರಗನಹಳ್ಳಿ, ಚೋಳೆನ ಹಳ್ಳಿ, ದೊಡ್ಡೇಗೌಡನ ಕೊಪ್ಪಲು, ಕೆಲಗೆರೆ, ಮೂಡಲಮೆಳ್ಳಹಳ್ಳಿ, ಗೋವಿಂದಘಟ್ಟ, ಕನ್ನೇನಹಳ್ಳಿ, ಹೂವಿನಹಳ್ಳಿ, ನರಗಲು, ತ್ಯಾಪೇನಹಳ್ಳಿ, ಅಂಕುಶಪುರ, ಪಿ.ಚಿಟ್ಟನಹಳ್ಳಿ, ಬೆಟ್ಟದಕೋಟೆ, ಅಳಿಸಂದ್ರ, ಎ. ನಾಗತಿಹಳ್ಳಿ, ಕೋಡಿಹಳ್ಳಿ, ಕಂಡಹಳ್ಳಿ, ದೇವೇಗೌಡನಕೊಪ್ಪಲು, ಚೋಳೇನ ಹಳ್ಳಿಕೊಪ್ಪಲು ಹಾಗೂ ಅರೆಹಳ್ಳಿ ಸೇರಿದಂತೆ ಒಟ್ಟು 24 ಹಕ್ಕುಗ್ರಾಮಗಳನ್ನು ಹೊಂದಿರುವ ತಾಲ್ಲೂಕಿನ ಏಕೈಕ ಶಕ್ತಿದೇವತೆ ಎಂಬ ಖ್ಯಾತಿ ಈ ಕ್ಷೇತ್ರಕ್ಕಿದೆ.

15 ದಿನಗಳ ಹಬ್ಬ:  ಪ್ರತಿವರ್ಷ ಯುಗಾದಿ ಕಳೆದನಂತರದ ಮಂಗಳವಾರದಿಂದ ಪ್ರಾರಂಭವಾಗಿ ಮುಂದಿನ ಹದಿನೈದನೇ ದಿನದ ಮಂಗಳವಾರ ಇಡೀರಾತ್ರಿ ನಡೆಯುವ ಸಿಡಿಬಂಡಿ ಮತ್ತು ಬುಧವಾರದ ಹಾಮಂಗಳಾರತಿಯೊಂದಿಗೆ ಹಬ್ಬಕ್ಕೆ ತೆರೆಬೀಳಲಿದೆ.

ಮಾ. 24ರಂದು ರಾತ್ರಿ ಕೆಲಗೆರೆ ಗ್ರಾಮಸ್ಥರು ಹುಲಿಕೆರೆಗೆ ಹೂವು ಹೊಂಬಾಳೆ ತರುವುದು ಹಾಗೂ ನರಗನಹಳ್ಳಿ ಗ್ರಾಮಸ್ಥರು ಅಮ್ಮನವರನ್ನು ಅಲಂಕರಿಸಿಕೊಂಡು ಮೆರವಣಿಗೆ ಮೂಲಕ ಕೆಲಗೆರೆ ಗ್ರಾಮಕ್ಕೆ ತಂದು ಕಂಬ ಸ್ಥಾಪಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿದೆ.

ಅಂದಿನಿಂದ ಅಮ್ಮ ಪಟ್ಟಕ್ಕೆ ಕುಳಿತುಕೊಂಡಳೆಂಬುದು ಇಲ್ಲಿಯ ಜನರ ನಂಬಿಕೆ. ಪ್ರತಿದಿನ ಏ. 6ರವರೆಗೆ ಬೆಳಗ್ಗೆ ಅಭಿಷೇಕ ಸಮೇತ ಪೂಜಾ ಕೈಂಕರ್ಯಗಳು ಮೂಲಕ್ಷೇತ್ರ ಹುಲಿಕೆರೆಯಲ್ಲಿ ನಡೆದರೆ, ಪ್ರತಿರಾತ್ರಿ ಹಕ್ಕುಳ್ಳ ಗ್ರಾಮಗಳಿಂದ ಸರದಿಯಂತೆ ಕೆಲಗೆರೆ ಗ್ರಾಮದಲ್ಲಿ ರಂಗಕುಣಿತ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.