ADVERTISEMENT

ಹಳ್ಳಿಕೆರೆ: ಮೂಲಸೌಕರ್ಯಗಳ ಕೊರತೆ

ಗ್ರಾಮ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:01 IST
Last Updated 12 ಮಾರ್ಚ್ 2014, 6:01 IST

ಮದ್ದೂರು: ಹೂಳು ತುಂಬಿದ ಚರಂಡಿಗಳು, ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಕೊರಕಲು ಬಿದ್ದ ರಸ್ತೆಗಳು. ಎಲ್ಲಂದರಲ್ಲಿ ಕಾಣಸಿಗುವ ತಿಪ್ಪೆಗುಂಡಿಗಳು.

ಇದು ತಾಲ್ಲೂಕು ಕೇಂದ್ರದಿಂದ 14ಕಿ.ಮೀ. ದೂರದಲ್ಲಿರುವ ಹಳ್ಳಿಕೆರೆ ಗ್ರಾಮದ ದುಸ್ಥಿತಿಯ ಚಿತ್ರಣ. 175 ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಅಂದಾಜು 2 ಸಾವಿರ ಜನಸಂಖ್ಯೆಯಿದೆ. ನಾಲ್ಕು ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇಷ್ಟಾದರೂ, ಈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.

ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿಗೆ ಸೇರಿರುವ ಈ ಗ್ರಾಮದಲ್ಲಿ, ಪರಿಶಿಷ್ಟರ ಕಾಲೋನಿ ಹೊರತು ಪಡಿಸಿ ಯಾವುದೇ ರಸ್ತೆಗಳು ಇಂದಿಗೂ ಡಾಂಬರು ಭಾಗ್ಯ ಕಂಡಿಲ್ಲ. ಹಲವು ಬೀದಿಗಳಿಗೆ ಇಂದಿಗೂ ಚರಂಡಿ ಇಲ್ಲ.  ಸ್ಥಳೀಯ ಗ್ರಾಮ ಪಂಚಾಯಿತಿ ಶುಚಿತ್ವದೆಡೆಗೆ ಗಮನಹರಿಸದ ಕಾರಣ ಗ್ರಾಮದಲ್ಲಿರುವ ಬಹುತೇಕ ಹಳೆ ಕಾಲದ ಚರಂಡಿಗಳು ಹೂಳು ತುಂಬಿಕೊಂಡು, ರೋಗದ ಕೇಂದ್ರಗಳಾಗಿ ಪರಿವರ್ತನೆ ಹೊಂದಿವೆ.

ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಖಾಸಗಿ ಶಾಲೆಗಳ ಪೈಪೋಟಿ ನಡುವೆ ಇಲ್ಲಿನ ದಾಖಲಾತಿ ಕುಸಿದಿದೆ.  ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.

ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊರತೆ ಇಲ್ಲ. ಬರ ಪರಿಹಾರ ಕಾಮಗಾರಿ ಯೋಜನೆಯಡಿಯಲ್ಲಿ ಕಿರು ನೀರು ಸರಬರಾಜು ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಇವುಗಳ ಶುಚಿತ್ವ ಹಾಗೂ ನಿರ್ವಹಣೆ ಸಮರ್ಪಕವಾಗಿಲ್ಲ.

ಶಿಂಷಾನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಳ್ಳದ ಕಾರಣ ಇಂದಿಗೂ ಈ ಗ್ರಾಮಕ್ಕೆ ಶುದ್ಧ ನೀರಿನ ಪೂರೈಕೆ ಕನಸಾಗಿಯೇ ಉಳಿದಿದೆ.

’ನಮ್ಮ ಗ್ರಾಮದ ಪರಿಶಿಷ್ಟ ಜನರಿಗೆ ಗಂಗಾಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರದಿಂದ ದೊರಕಬೇಕಾದ ಯಾವುದೇ ಸವಲತ್ತುಗಳು ಇಂದಿಗೂ ಸಿಕ್ಕಿಲ್ಲ. ಇಂದಿಗೂ ಹಲವು ಪರಿಶಿಷ್ಟ ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿ ದೊರಕಿಲ್ಲ. ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ ಕೆಲಸದ ಚೀಟಿ ದೊರಕಿಲ್ಲ. ಸ್ವಂತ ಜಮೀನು ಇಲ್ಲದ ನಾವು ಬದುಕುವುದಾದರೂ ಹೇಗೆ?’ ಎಂದು ಗ್ರಾಮದ ರವಿ ಪ್ರಶ್ನಿಸುತ್ತಾರೆ.

’ ಇಂದಿಗೂ ನಾವು ಮಳೆಯನ್ನೇ ಆಶ್ರಯಿಸಿ ಬೇಸಾಯ ಮಾಡುತ್ತಿದ್ದೇವೆ.  ಸಮೀಪದ ಶಿಂಷಾ ಏತನೀರಾವರಿ ಯೋಜನೆ ಹುಲಿಕೆರೆ ಬಳಿ ಆರಂಭಗೊಂಡು ಕಳಪೆ ಕಾಮಗಾರಿಯಿಂದಾಗಿ ನಿಂತು ಹೋಯಿತು. ಕಳೆದ 13ವರ್ಷಗಳಿಂದ ಒಂದೇ ಒಂದು ಹನಿ ನೀರು ರೈತರ ಜಮೀನುಗಳಿಗೆ ಹರಿದಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ಪುಟ್ಟಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.