ADVERTISEMENT

ಹೆಜ್ಜೇನು ದಾಳಿ: ಎರಡು ದಿನ ರಂಗನತಿಟ್ಟು ಪಕ್ಷಿಧಾಮ ಬಂದ್‌

​ಪ್ರಜಾವಾಣಿ ವಾರ್ತೆ
Published 15 ಮೇ 2019, 13:58 IST
Last Updated 15 ಮೇ 2019, 13:58 IST
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಕೇಂದ್ರದ ಬಳಿ ಮರದಲ್ಲಿರುವ ಹೆಜ್ಜೇನು ಗೂಡು
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಕೇಂದ್ರದ ಬಳಿ ಮರದಲ್ಲಿರುವ ಹೆಜ್ಜೇನು ಗೂಡು   

ಶ್ರೀರಂಗಪಟ್ಟಣ: ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಕೇಂದ್ರದ ಬಳಿ ಮೇ 13ರಂದು ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ ಕಾರಣ ಎರಡು ದಿನ ಪಕ್ಷಿಧಾಮ ಪ್ರವೇಶ ನಿಷೇಧಿಸಲಾಗಿತ್ತು.

ಎರಡು ದಿನದಲ್ಲಿ ಅರಣ್ಯ ಇಲಾಖೆಗೆ ₹ 2.40 ಲಕ್ಷ ನಷ್ಟ ಉಂಟಾಗಿದೆ. ಬುಧವಾರ ರಾತ್ರಿ ನಡೆಯಲಿರುವ ಜೇನು ಹುಳು ತೆರವು ಕಾರ್ಯಾಚರಣೆ ಯಶಸ್ವಿಯಾದರೆ ಗುರುವಾರದಿಂದ ಪ್ರವಾಸಿಗರಿಗೆ ಪ್ರವೇಶ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಮೇಟಿ ಕುಪ್ಪೆಯಿಂದ ನಾಲ್ವರು ಜೇನು ಕುರುಬರನ್ನು ಕರೆಸಲಾಗಿದೆ. ಅವುಗಳನ್ನು ಸುಡದೇ ಸೊಪ್ಪಿನಿಂದ ಹೊಗೆ ಹಾಕಿ ದೂರ ಓಡಿಸಲಾಗುವುದು. ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದರು.

ADVERTISEMENT

ಮೇ 13ರಂದು ಮಧ್ಯಾಹ್ನ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದವು. ಅಸ್ವಸ್ಥಗೊಂಡ 12 ಜನರನ್ನು ಪಕ್ಷಿಧಾಮದ ಸಿಬ್ಬಂದಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಹೆಜ್ಜೇನು ಗುಂಪು ದೋಣಿ ವಿಹಾರ ಕೇಂದ್ರದ ಬಳಿಯ ರೈಟ್ರಿ ಮರದಲ್ಲಿ ಇನ್ನೂ ಬೀಡು ಬಿಟ್ಟಿದೆ. ಹೀಗಾಗಿ ಬುಧವಾರ ಸಂಜೆವರೆಗೂ ಪಕ್ಷಿಧಾಮಕ್ಕೆ ಪ್ರವೇಶ ಇರಲಿಲ್ಲ.

‘ಹೆಜ್ಜೇನು ಗೂಡು ಹಲವು ತಿಂಗಳಿಂದಲೂ ಪಕ್ಷಧಾಮದ ಇದೇ ಮರದಲ್ಲಿದೆ. ಎಂದಿಗೂ ಕೆರಳಿರಲಿಲ್ಲ. ಜೇನುಗೂಡು ಇರುವ ಮರದ ರೆಂಬೆ ಗಾಳಿಗೆ ಜೋರಾಗಿ ತೂಗಾಡಿದ್ದರಿಂದ ಜೇನುಗಳು ಹಾರಾಡಿ ಜೇನು ಹುಳು ಕಚ್ಚಿವೆ’ ಎಂದು ಪುಟ್ಟಮಾದೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.