ADVERTISEMENT

ಹೆಣ್ಣುಭ್ರೂಣ ಹತ್ಯೆ ಹೆಚ್ಚಳ: ವಿಷಾದ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 5:23 IST
Last Updated 1 ಏಪ್ರಿಲ್ 2013, 5:23 IST

ಪಾಂಡವಪುರ: ಜಿಲ್ಲೆಯಲ್ಲಿಯೇ ಪಾಂಡ ವಪುರ ತಾಲ್ಲೂಕಿನಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು 1000 ಗಂಡಸರಿಗೆ 910 ಹೆಣ್ಣುಮಕ್ಕಳಿದ್ದಾರೆ. ಎಲ್ಲ ಕಡೆ ಈ ಪರಿಸ್ಥಿತಿಯೇ ನಿರ್ಮಾಣ ವಾದರೆ ಮುಂದಿನ ಜೀವ ಸೃಷ್ಟಿಯೇ ಕಷ್ಟವಾಗುತ್ತದೆ ಎಂದು ಜನವಾದಿ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಕುಮಾರಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘ, ಸ್ಫೂರ್ತಿ ಮಹಿಳಾ ಮಂಡಳಿ, ಯುಮುನ ಯುವತಿ ಮಂಡಳಿ ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿ ನಡೆಯುತ್ತಿವೆ. ಗಂಡು ಹುಟ್ಟಿದರೆ ವರದಾನ, ಹೆಣ್ಣು ಹುಟ್ಟಿದರೆ ಶಾಪ ಎಂಬ ಮನೋಭಾವ ಸಮಾಜದಲ್ಲಿ ಬೆಳೆದಿರುವುದರಿಂದ ಹೆಣ್ಣುಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಹೆಣ್ಣು ಒಂದು ತಾಯಿಯಾಗಿ, ಹೆಂಡತಿಯಾಗಿ ಬೇಕು. ಆದರೆ ಪುತ್ರಿಯಾಗಿ ಏಕೆ ಬೇಡ? ಎಂದು ಪ್ರಶ್ನಿಸಿದ ಅವರು, ಮಕ್ಕಳಾಗಲಿಲ್ಲ ಹಾಗೂ ಗಂಡು ಮಗುವಾಗಲಿಲ್ಲ ಎಂದು ಮತ್ತೊಂದು ಮದುವೆಯಾಗುವ ಗಂಡಸರು ತಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ಚಿಂತಿಸುವುದೇ ಇಲ್ಲ.

ಹೆಣ್ಣು ಅಥವಾ ಗಂಡು ಹುಟ್ಟಿಗೆ ಗಂಡಸರಲ್ಲಿರುವ ಜೈವಿಕ ಅಂಶಗಳೇ ಕಾರಣ ಎಂಬುದನ್ನು ಅರಿಯಬೇಕಾಗಿದೆ ಎಂದರು.
ಮೈಸೂರು ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಾದ ಕೃಷ್ಣಯ್ಯಗೌಡ ಮಾತನಾಡಿ, ಮಹಿಳೆಯರಿಗೆ ಆರ್ಥಿಕ ಸಬಲೀಕರಣ ತಂದುಕೊಟ್ಟಿರುವ ಸ್ವಸಹಾಯ ಸಂಘಗಳು ಮತ್ತುಷ್ಟು ಬಲವರ್ಧನೆಗೊಳ್ಳಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಪ್ರೇಮಾ ವಿಶ್ವನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕ್ಯಾತನಹಳ್ಳಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಮಣಿಯಮ್ಮ, ಕಾರ್ಯದರ್ಶಿ ಅಂಬುಜಾ, ಸ್ಪೂರ್ತಿ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಸರೋಜಮ್ಮ, ಕಾರ್ಯದರ್ಶಿ ಬಿ.ಎಸ್.ರೇಣುಕಮ್ಮ, ಯಮುನಾ ಯುವತಿ ಮಂಡಳಿಯ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಪ್ರೇಮಾ, ಕಾರ್ಯದರ್ಶಿ ಡಿ.ಸುಜಾತಾ, ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ, ಸುನೀತಾ ಪುಟ್ಟಣ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.