ADVERTISEMENT

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:19 IST
Last Updated 25 ಸೆಪ್ಟೆಂಬರ್ 2013, 8:19 IST

ಮಂಡ್ಯ: ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ತಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಜೊತೆಗೂಡಿ ಮಹಿಳಾ ಮುನ್ನಡೆ ಸಂಘಟನೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಸಾರ್ವಜನಿಕ ಜಾಗೃತಿ ಜಾಥಾ ನಡೆಸಿದರು.

ಸರ್ಕಾರಿ ಬಸ್‌ ನಿಲ್ದಾಣ ಸಮೀಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ಅವರು, ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರು ಗಮನ ಸೆಳೆದರು.

ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಹಿಳಾ ಮುನ್ನಡೆಯ ಮಲ್ಲಿಗೆ, ಕಮಲಾ ಆಗ್ರಹಿಸಿದರು.

ಮನವಿಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಎನ್‌.ಕೃಷ್ಣಯ್ಯ, ‘ದೌರ್ಜನ್ಯ ತಡೆ ಸಂಬಂಧ ಸಮಿತಿ ರಚನೆ ಮಾಡಲು ಶೀಘ್ರ ಸಭೆ ನಡೆಸ­ಲಾಗುವುದು. ಅಲ್ಲದೆ, ಜಿಲ್ಲೆಯಲ್ಲಿ ಮಹಿಳಾ ಪೊಲೀಸ್‌ ಠಾಣೆ ರಚಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಹೇಳಿದರು.
ಮಹಿಳಾ ಮುನ್ನಡೆ ಕಾರ್ಯಕರ್ತರ ಜೊತೆಗೆ ಮಹಿಳಾ ಸರ್ಕಾರಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲುಕಟ್ಟಡ ಹಾಗೂ ಮಾಜಿ ಪುರಸಭೆ) ಹಾಗೂ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಮಹಿಳಾ ಮುನ್ನಡೆಯ ಅಂಜಲಿ, ಈಶ್ವರಿ, ಸವಿತಾ, ಕರ್ನಾಟಕ ಜನಶಕ್ತಿಯ ಮುತ್ತುರಾಜ್‌, ಎಂ.ಸಿ. ಲಂಕೇಶ್‌, ವಿದ್ಯಾರ್ಥಿಗಳಾದ ರವಿ­ಕುಮಾರ್‌, ಶಿವಕುಮಾರ್‌, ಸಿದ್ದರಾಜು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.