ADVERTISEMENT

ಕೆ.ಆರ್‌.ಪೇಟೆ: ಕಾರು, ಬೈಕ್‌ನಲ್ಲಿದ್ದ ₹ 10.80 ಲಕ್ಷ ಕಳವು

ಪಟ್ಟಣದಲ್ಲಿ ನಡೆದ ಪ್ರತ್ಯೇಕ ಪ್ರಕರಣ; ಬ್ಯಾಂಕ್‌ನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 3:32 IST
Last Updated 16 ಜುಲೈ 2021, 3:32 IST
ಕೆ.ಆರ್.ಪೇಟೆ ಪಟ್ಟಣದ ನಿವೃತ್ತ ಶಿಕ್ಷಕ ಎಸ್.ನಾಗರಾಜು ಅವರ ಕಾರು
ಕೆ.ಆರ್.ಪೇಟೆ ಪಟ್ಟಣದ ನಿವೃತ್ತ ಶಿಕ್ಷಕ ಎಸ್.ನಾಗರಾಜು ಅವರ ಕಾರು   

ಕೆ.ಆರ್.ಪೇಟೆ: ಪಟ್ಟಣದಲ್ಲಿ ಗುರುವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹ 10 ಲಕ್ಷ ಹಣವನ್ನು ಕಾರು ಮತ್ತು ಬೈಕ್‌ನಿಂದ ಕಳವು ಮಾಡಲಾಗಿದೆ.

ಗಾಜು ಒಡೆದು ₹ 7 ಲಕ್ಷ ಕಳವು: ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆ ನಿವಾಸಿ, ನಿವೃತ್ತ ಶಿಕ್ಷಕ ಎಸ್.ನಾಗರಾಜು ಅವರು ಗುರುವಾರ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ₹ 7ಲಕ್ಷ ಹಣ ಡ್ರಾಮಾಡಿಕೊಂಡು ಪತ್ನಿ ಜತೆ ಕಾರಿನಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಅಪರಿಚಿತರು ಕಾರನ್ನು ಪಲ್ಸರ್ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ.

ಮುತ್ತುರಾಯಸ್ವಾಮಿ ಬಡಾವಣೆಯ ಲ್ಲಿರುವ ತಮ್ಮ ಮನೆಗೆ ಬಂದ ನಾಗರಾಜು ದಂಪತಿ ಕಾರನ್ನು ಮನೆ ಮುಂದೆ ನಿಲ್ಲಿಸಿ ಮನೆಯೊಳಗೆ ಹೋಗಿದ್ದಾರೆ. ಹಿಂಬಾಲಿಸಿದ ಅಪರಿಚಿತರು ಕಾರಿನ ಬಾಗಿಲಿನ ಗಾಜು ಒಡೆದು ಅಲ್ಲಿ ಇಟ್ಟಿದ್ದ ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಲು ಯತ್ನಿಸುವಾಗ ಕಾರಿನ ಸೈರನ್ ಮೊಳಗಿದೆ.

ADVERTISEMENT

ಇದನ್ನು ಕೇಳಿಸಿಕೊಂಡ ನಾಗರಾಜು, ಮನೆಯಿಂದ ಹೊರ ಬರುವಷ್ಟರಲ್ಲಿ ಹೆಲ್ಮೆಟ್ ಧರಿಸಿಕೊಂಡಿದ್ದ ಅಪರೊಇಚಿತರು ಹಣದ ಬ್ಯಾಗ್ ಸಮೇತ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ತಕ್ಷಣ ನಾಗರಾಜು ಕೂಡ ಅವರನ್ನು ಹಿಂಬಾಲಿಸಿದ್ದಾರೆ. ಹೇಮಾವತಿ ಬಡಾವಣೆಯ ಗಲ್ಲಿಗಳಲ್ಲಿ ಬೈಕ್ ನುಗ್ಗಿಸಿಕೊಂಡು ಹೋದವರು ತಪ್ಪಿಸಿಕೊಂಡರು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಅವರು ದೂರು ನೀಡಿದ್ದಾರೆ.

ಬೈಕ್‌ನಲ್ಲಿದ್ದ ₹ 3.80 ಲಕ್ಷ ಕಳವು: ಮತ್ತೊಂದು ಪ್ರಕರಣದಲ್ಲಿ ಜೈನಹಳ್ಳಿಯಹರೀಶ್ ಎಂಬುವವರು ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ನಿಂದ ₹ 3.80 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಹೊರಟಿದ್ದಾರೆ. ಇದನ್ನು ಗಮನಿಸಿದ ಮತ್ತೊಂದು ತಂಡ ಅವರನ್ನು ಹಿಂಬಾಲಿಸಿದೆ.

ಹರೀಶ್ ಕಾರ್ಯ ನಿಮಿತ್ತ ತಾಲ್ಲೂಕು ಪಂಚಾಯಿತಿ ಕಚೇರಿ ಒಳಗೆ ಹೋಗಿವಾಗ ಹಣ ಇದ್ದ ಬ್ಯಾಗೆ ಅನ್ನು ಬೈಕ್‌ನಲ್ಲೇ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ತಂಡ ಬ್ಯಾಗ್ ಅನ್ನು ಎತ್ತಿಕೊಂಡು ಹೋಗಿದೆ. ಕಚೇರಿ ಕೆಲಸ ಮುಗಿಸಿ ಹೊರಬಂದ ಹರೀಶ್ ಬ್ಯಾಗ್ ಇಲ್ಲದುದನ್ನು ಗಮನಿಸಿ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಕಾರ್ಯಪ್ರವೃತ್ತರಾದ ಪಿಎಸ್ಐ ಬ್ಯಾಟರಾಯಗೌಡ ನೇತೃತ್ವದ ಪೊಲೀಸ್ ತಂಡ ಗ್ರಾಮಭಾರತಿ, ಟೌನ್ ಕ್ಲಬ್, ಪ್ರವಾಸಿಮಂದಿರ ವೃತ್ತ, ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಸೇರಿದಂತೆ ವಿವಿಧೆಡೆ ಇರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಗಳ ಪತ್ತೆಗಾಗಿ ಕ್ರಮ ತೆಗೆದುಕೊಂಡಿದ್ದಾರೆ.

ಅಮೂಲ್ಯ ವಸ್ತು ಬಿಟ್ಟು ಹೋಗದಿರಿ: ‘ಪ್ರಜಾವಾಣಿ’ಗೆ ಜತೆ ಮಾತನಾಡಿದ ಪಿಎಸ್ಐ ಬ್ಯಾಟರಾಯಗೌಡ, ಎರಡು ಕಡೆ ನಡೆದಿರುವ ಘಟನೆ ಗಮನಿಸಿದರೆ ದುಷ್ಕರ್ಮಿಗಳು ವೃತ್ತಿ ನಿರತರಾಗಿದ್ದು, ಹಲವು ಗುಂಪುಗಳಲ್ಲಿ ಬಂದಿರುವ ಶಂಕೆ ಇದೆ. ಬ್ಯಾಂಕ್ ಬಳಿ ಹೊಂಚು ಹಾಕಿ ನಂತರ ಬ್ಯಾಂಕ್‌ನಿಂದ ಹೊರಬಂದವರನ್ನು ಹಿಂಬಾಲಿಸಿ ಇಂಥ ಕೃತ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ಅಮೂಲ್ಯ ವಸ್ತುಗಳನ್ನು ವಾಹನದಲ್ಲಾಗಲಿ, ಸಾರ್ವಜನಿಕ ಸ್ಥಳಗಳಲ್ಲಾಗಲಿ ಬಿಟ್ಟು ಹೋಗಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.