ಮಂಡ್ಯ: ‘ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರ ನೀರು ಹರಿಸಿದ್ದರ ಪರಿಣಾಮವಾಗಿ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ₹1,200 ಕೋಟಿ ಬೆಳೆ ನಷ್ಟವಾಗಿದೆ. ಸರ್ಕಾರ ಇದನ್ನು ತುಂಬಿಕೊಡಬೇಕು’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ ಒತ್ತಾಯಿಸಿದರು.
‘ಕರ್ನಾಟಕ ಪ್ರಸ್ತುತ ಹನ್ನೊಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡುತ್ತಿದ್ದು, 20 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಪ್ರದೇಶವನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. ಆದರೆ, ಆ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನವನ್ನೇ ಮಾಡುತ್ತಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕಾವೇರಿ ಕೊಳ್ಳದ ನೀರಾವರಿ ಅಂತರ್ಜಲ, ವಿದ್ಯುತ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಗತ ಮಾಡಬೇಕು. ಇದಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ ಶೇ 30 ರಷ್ಟು ಅನುದಾನ ಕಾಯ್ದಿರಿಸಬೇಕು’ ಎಂದರು.
‘ಅತಿವೃಷ್ಠಿ ಸಮಯದಲ್ಲಿ ಮಳೆ ನೀರನ್ನು ಕಾವೇರಿ ಕೊಳ್ಳದಲ್ಲಿ ಹಿಡಿದಿಟ್ಟಕೊಳ್ಳುವ ಪ್ರಯತ್ನವಾಗಬೇಕು. ಪ್ರವಾಹ ಬಂದಾಗ ನೀರು ಹಿಡಿದಿಟ್ಟುಕೊಂಡಿದ್ದರೆ ಬರದ ಈ ಸಂದರ್ಭದಲ್ಲಿ ನೀರಿಗಾರಿ ಪರಿತಪಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಕಾವೇರಿ ಕೊಳ್ಳದ ಪ್ರದೇಶದ ಬರಗಾಲವನ್ನು ತಡೆಯುವ ಕ್ರಮಗಳನ್ನೇ ಸರ್ಕಾರ ಕೈಗೊಳ್ಳುತ್ತಿಲ್ಲ’ ಎಂದರು.
‘ಕಾವೇರಿ ಕೊಳ್ಳದಲ್ಲಿ ಸಣ್ಣ, ಮಧ್ಯಮ, ದೊಡ್ಡ ನೀರಾವರಿಯಂತಹ ಯೋಜನೆಯನ್ನು ತುರ್ತಾಗಿ ಕಾರ್ಯಗತ ಮಾಡಲು ಕ್ರಮ ವಹಿಸಬೇಕು. ಕೆಆರ್‌ಎಸ್ ಜಲಾಶಯ ಭದ್ರತೆ, ರಕ್ಷಣೆ ಮುಖ್ಯವಾಗಿದ್ದು, ಗಣಿಗಾರಿಕೆ, ಪರೀಕ್ಷಾರ್ಥ ಸ್ಪೋಟ, ಡಿಸ್ನಿಲ್ಯಾಂಡ್ ಕಾರ್ಯಚಟುವಟಿಕೆಗಳನ್ನು ಅಣೆಕಟ್ಟೆಯ ಪ್ರದೇಶಗಳಲ್ಲಿ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
‘ಕಾವೇರಿ ನದಿ ನೀರು ನ್ಯಾಯಮಂಡಳಿ ನೀಡಿರುವ ತೀರ್ಪು ಏಕಪಕ್ಷೀಯವಾಗಿದ್ದು, ಪಾಲಿಸಲಾಗದಂತ ತೀರ್ಪು ಆಗಿರುವುದರಿಂದ ರಾಜ್ಯ ಸರ್ಕಾರ ತೀರ್ಪನ್ನು ತಿರಸ್ಕರಿಸಬೇಕು. ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳು ರೈತರ ಪಾಲಿಗೆ ಮರಣಶಾಸನವಾಗಿವೆ’ ಎಂದರು.
‘ಕರ್ನಾಟಕ ಒಪ್ಪಿಕೊಳ್ಳಲು, ಪಾಲಿಸಲು ಸಾಧ್ಯವಿಲ್ಲದಂತಹ ಘೋರ ಆದೇಶವನ್ನು ಸರ್ಕಾರ ತಿರಸ್ಕರಿಸಿ ಕಾನೂನು ಹೋರಾಟ ಮುಂದುವರಿಸಬೇಕು. ಕಾವೇರಿ ಕೊಳ್ಳದ ನದಿ, ನೀರು ಉಳಿವು, ಜಲಾಶಯ ರಕ್ಷಣೆ ಮಾಡುವ ಕರ್ತವ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ತಮಿಳುನಾಡು ಸರ್ಕಾರ ಒಕ್ಕೂಟಕ್ಕೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ. ಹಠಮಾರಿತನದ ಧೋರಣೆಯಿಂದಾಗಿ ನೀರು ಲಭ್ಯವಿಲ್ಲದಿದ್ದರೂ ನಿರಂತರವಾಗಿ ನೀರನ್ನು ಪಡೆದುಕೊಳ್ಳುತ್ತಿದೆ. ತನ್ನ ಕೃಷಿ ಪ್ರದೇಶವನ್ನು ಕೇಂದ್ರದ ಅನುದಾನದಿಂದ ಹೆಚ್ಚೆಚ್ಚು ವಿಸ್ತಾರ ಮಾಡಿಕೊಳ್ಳುತ್ತಿದೆ. ಕರ್ನಾಟಕ ನೀರಾವರಿ ಪ್ರದೇಶಗಳ ವಿಸ್ತರಣೆಗೆ ಅಡ್ಡಿಪಡಿಸುತ್ತಿದೆ’ ಎಂದರು.
ಸಮಿತಿಯ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸಾತನೂರು ವೇಣುಗೋಪಾಲ್, ಮಂಜುನಾಥ್, ನಾರಾಯಣ್, ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.