ಶ್ರೀರಂಗಪಟ್ಟಣ: ಪಟ್ಟಣದ ಭಾಗದ ನೈರುತ್ಯ ಕೋಟೆ ಮತ್ತು ಕಂದಕಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಜೋಡಿ ನೆಲಮಾಳಿಗೆ ಸ್ಮಾರಕದ ಸ್ಥಳವನ್ನು ಆಚೀವರ್ಸ್ ಅಕಾಡೆಮಿ ಮತ್ತು ಪ್ರಜ್ಞಾವಂತರ ವೇದಿಕೆಯ ಕಾರ್ಯಕರ್ತರು ಬುಧವಾರ ಸ್ವಚ್ಛಗೊಳಿಸಿದರು.
ಬೆಂಗಳೂರು– ಮೈಸೂರು ಹೆದ್ದಾರಿಯಿಂದ ನೆಲಮಾಳಿಗೆವರೆಗೆ 150 ಮೀಟರ್ ಉದ್ದಕ್ಕೂ ಇದ್ದ ಗಿಡ ಗಂಟಿಗಳನ್ನು ಕತ್ತರಿಸಿ ಕಾಲು ಹಾದಿಯನ್ನು ಮಾಡಿದರು. ನೆಲಮಾಳಿಗೆಗಳ ಪ್ರವೇಶ ದ್ವಾರದಲ್ಲಿ ಬೆಳೆದಿದ್ದ ಮುಳ್ಳು ಗಂಟಿಗಳು ಮತ್ತು ಸಣ್ಣ ಗಾತ್ರದ ಮರಗಳನ್ನು ಕತ್ತರಿಸಿ ಹಸನು ಮಾಡಿದರು. ಗಾಂಧಿವಾದಿ ಡಾ.ಬಿ. ಸುಜಯಕುಮಾರ್, ಆಚೀವರ್ಸ್ ಅಕಾಡೆಮಿ ಮುಖ್ಯಸ್ಥ ಆರ್. ರಾಘವೇಂದ್ರ, ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ತಂಡ ಸ್ಮಾರಕದ ಪರಿಸರದಲ್ಲಿ ಸತತ ಮೂರು ತಾಸುಗಳ ಕಾಲ ಶ್ರಮದಾನ ನಡೆಸಿತು.
‘ಕೋಟೆ ಮತ್ತು ಕಂದಕದ ನಡುವೆ ಟಿಪ್ಪು ಸುಲ್ತಾನ್ ಕಾಲದ ಜೋಡಿ ನೆಲಮಾಳಿಗೆಗಳು ಇದ್ದು, ಈ ಸ್ಮಾರಕಗಳ ಬಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದ ಕಾರಣ ಯಾವ ಪ್ರವಾಸಿಗರೂ ಇತ್ತ ಬರುತ್ತಿರಲಿಲ್ಲ. ಪ್ರಾಚ್ಯವಸ್ತು ಇಲಾಖೆ ಕೂಡ ಇತ್ತ ಗಮನ ಹರಿಸಿರಲಿಲ್ಲ. ಈ ಅಪರೂಪದ ಸ್ಮಾರಕಗಳು ಜನರಿಗೆ ಸುಲಭವಾಗಿ ಗೋಚರವಾಗುವಂತೆ ಮಾಡಲು ಪ್ರಯತ್ನ ಆರಂಭಿಸಿದ್ದೇವೆ. 18ನೇ ಶತಮಾನದಲ್ಲಿ ಇದ್ದ ಮಾದರಿಯಲ್ಲಿಯೇ ಅವುಗಳನ್ನು ಸಂರಕ್ಷಿಸಲು ಕಾಯಕಲ್ಪ ನೀಡಲಾಗುವುದು’ ಎಂದು ಆಚೀವರ್ಸ್ ಅಕಾಡೆಮಿ ಮುಖ್ಯಸ್ಥ ಆರ್. ರಾಘವೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.