ADVERTISEMENT

ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿದ್ಧತೆ

ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ವೇದಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 9:31 IST
Last Updated 11 ಜನವರಿ 2018, 9:31 IST
ಕೆ.ಆರ್.ಪೇಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ 12ರಂದು ಬರಲಿರುವ ಕಾರಣ ಎಸ್‌ಪಿ ಜಿ.ರಾಧಿಕಾ ಕ್ರೀಡಾಂಗಣದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು
ಕೆ.ಆರ್.ಪೇಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ 12ರಂದು ಬರಲಿರುವ ಕಾರಣ ಎಸ್‌ಪಿ ಜಿ.ರಾಧಿಕಾ ಕ್ರೀಡಾಂಗಣದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು   

ಮಳವಳ್ಳಿ: ತಾಲ್ಲೂಕಿನಲ್ಲಿ ಕೈಗೊಂಡಿರುವ ಹಲವು ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ಪ್ರತಿಬಿಂಬಿಸುವ ಸಮಾವೇಶ ಜ. 12ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಬಡವರು, ಹಿಂದುಳಿದವರು ಹಾಗೂ ದೀನದಲಿತರ ಬವಣೆ ನೀಗಿಸುವ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಲು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಏ. 20ರಂದು ಪಟ್ಟಣದ ಶಾಂತಿ ಕಾಲೇಜು ಎದುರಿನ ಆವರಣದಲ್ಲಿ ₹ 1,200 ಕೋಟಿ ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಅವುಗಳ ಪೈಕಿ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾಧನಾ ಸಮಾವೇಶದ ದಿನ ಉದ್ಘಾಟನೆ ನೆರೆವೇರಲಿದೆ ಎಂದು ಹೇಳಿದರು.

ADVERTISEMENT

‘ನನ್ನ ಅಧಿಕಾರಾಧಿಯಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗಿದೆ. ಮುಖ್ಯಮಂತ್ರಿಯೇ ಈ ಹಿಂದೆ ಚಾಲನೆ ನೀಡಿದ್ದ ಮಾರೇಹಳ್ಳಿ ಕೆರೆವ್ಯಾಪ್ತಿಯ ಕಾಲುವೆಗಳ ಆಧುನೀಕರಣ, ನಿರ್ಮಾಣಗೊಂಡಿರುವ ಶುದ್ಧ ಕುಡಿಯವ ನೀರಿನ ಘಟಕಗಳು, ಪಶು ಆಸ್ಪತ್ರೆಗಳು, ವಿದ್ಯುತ್ ಇಲಾಖೆಯ ವಿಭಾಗೀಯ ಕಚೇರಿ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡಗಳು, ಎಪಿಎಂಸಿಯಲ್ಲಿ ನಿರ್ಮಾಣಗೊಂಡಿರುವ ₹ 1.2 ಕೋಟಿ ವೆಚ್ಚದ ಕಟ್ಟಡ, ₹ 16 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ’ ಎಂದು ವಿವರಿಸಿದರು.

ತಾಂತ್ರಿಕ ಶಿಕ್ಷಣ ಇಲಾಖೆ ಮಂಜೂರು ಮಾಡಿರುವ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕ ಮುತ್ತತ್ತಿ ಮತ್ತು ಬಸವನಬೆಟ್ಟಗಳಲ್ಲಿ ಯಾತ್ರಿ ನಿವಾಸ, ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರಸ್ತೆಗಳು, ₹ 1.5 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ, ತಲಾ ₹ 1 ಕೋಟಿ ವೆಚ್ಚದಲ್ಲಿ ಬೆಳಕವಾಡಿ, ಹಲಗೂರು, ಪೂರಿಗಾಲಿ, ಮಿಕ್ಕೆರೆ ಹಾಗೂ ನೆಲಮಾಕನಹಳ್ಳಿ ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯಡಿ ಅಭಿವೃದ್ಧಿ ಪಡಿಸುವುದು, ಪೌರಾಡಳಿತ ಇಲಾಖೆಯ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮಂಜೂರಾಗಿರುವ ₹ 10 ಕೋಟಿ ವೆಚ್ಚದ ಕಾಮಗಾರಿಗಳು, ₹4.72 ಕೋಟಿ ವೆಚ್ಚದ ನಗರೋತ್ಥಾನ ಯೋಜನೆಗಳ ಕಾಮಗಾರಿ, ಮತ್ತು ಸುಮಾರು ₹ 20 ಕೋಟಿ ವೆಚ್ಚದಲ್ಲಿ ಬಿ.ಜಿ.ಪುರ ಹಾಗೂ ಹುಸ್ಕೂರು ಗ್ರಾಮಗಳಲ್ಲಿ ಮೊರಾರ್ಜಿ ಶಾಲೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ರಿಯಾಜಿನ್, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ವೃತ್ತ ನೀರಿಕ್ಷಕ ಶ್ರೀಕಾಂತ್, ಗಂಗಾಧರ್ಎ, ಸ್ಐ ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.