ADVERTISEMENT

ಮೇಲುಕೋಟೆಯಲ್ಲಿ ಸಂಭ್ರಮದ ವಿಷ್ಣುದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:28 IST
Last Updated 2 ಡಿಸೆಂಬರ್ 2020, 2:28 IST
ಮೇಲುಕೋಟೆಯ ದೇವಾಲಯದ ರಾಜಗೋಪುರದ ಮುಂದೆ ಬಂಡೀಕಾರರು ಕರಗ ಸುಟ್ಟರು
ಮೇಲುಕೋಟೆಯ ದೇವಾಲಯದ ರಾಜಗೋಪುರದ ಮುಂದೆ ಬಂಡೀಕಾರರು ಕರಗ ಸುಟ್ಟರು   

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ಬೆಟ್ಟದೊಡೆಯ ಯೋಗಾನರಸಿಂಹನ ಸನ್ನಿಧಿಯಲ್ಲಿ ಸೋಮವಾರ ರಾತ್ರಿ ವಿಷ್ಣುದೀಪೋತ್ಸವ ಸಂಭ್ರಮದೊಂದಿಗೆ ನೆರವೇರಿತು.

ರಾತ್ರಿ ದೇವಾಲಯದಲ್ಲಿ ನಿತ್ಯ ಪೂಜೆಯ ನಂತರ ವಿಷ್ಣುದೀಪದ ಕೈಂಕರ್ಯಗಳಿಗೆ ಚಾಲನೆ ನೀಡಿ ಅಂತಿಮವಾಗಿ ಮೂಲಮೂರ್ತಿಗೆ ಚೆಲ್ವತಿರುನಾರಾಯಣಸ್ವಾಮಿಗೆ ವೇದಘೋಷದೊಂದಿಗೆ ಕುಂಭಾರತಿ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿಗೆ ಶ್ರೀದೇವಿ ಭೂದೇವಿಯೊಂದಿಗೆ ಉತ್ಸವ ನೆರವೇರಿಸಲಾಯಿತು.

ಸ್ವಾಮಿಯ ಉತ್ಸವ ರಾಮಾನುಜರ ಸನ್ನಿಧಿಗೆ ಬಂದ ವೇಳೆ ಪಾತಾಳಾಂಕಣದಲ್ಲಿಡಲಾಗಿದ್ದ ನೂರಾರು ಹಣತೆಗಳನ್ನು ಭಕ್ತರು ಬೆಳಗಿಸಿದರು.

ADVERTISEMENT

ಪರಿಚಾರಕ ಪಾರ್ಥಸಾರಥಿ ಕುಂಭಾರತಿಯನ್ನು ಹೊತ್ತು ಸ್ವಾಮಿಯ ಉತ್ಸವ ಮುಂದೆ ಸಾಗಿ ವಿಷ್ಣು ದೀಪದ ಸಂಪ್ರದಾಯವನ್ನು ನೆರವೇರಿಸಿದರು. ರಾಜಗೋಪುರ ಬಳಿಗೆ ಉತ್ಸವ ಬಂದ ನಂತರ ಚೆಲುವನಿಗೆ ಆರತಿ ನೆರವೇರಿಸಲಾಯಿತು.

ಕುಂಭಾರತಿಯನ್ನು ಅಡಿಗೆಮನೆ ಪ್ರಸಾದ ಮಣೇಗಾರ್ ರಂಗನ್ ಗಡಚಿಕ್ಕುವ ಪಟಾಕಿ ಶಬ್ದದ ಸಡಗರದ ನಡುವೆ ಕೊಂಡೊಯ್ದು ಗರುಡಗಂಬದ ಮೇಲೆ ಪ್ರತಿಷ್ಠಾಪಿಸಿದರು. ಇದೇ ವೇಳೆ ಬಂಡೀಕಾರ ಬಾಲಕೃಷ್ಣ ನೇತೃತ್ವದ ತಂಡ ಎಣ್ಣೆಬಟ್ಟೆಯಿಂದ ಮಾಡಿದ ಕರಗನ್ನು ಸುಟ್ಟ ನಂತರ ದೇವರ ಉತ್ಸವ ಮತ್ತೆ ಒಳಪ್ರವೇಶಿಸಿತು.

ಚಂದ್ರಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ ಈ ಸಂಬಂಧ ಯಾವುದೇ ಧಾರ್ಮಿಕ ಕೈಂಕರ್ಯ ಇರಲಿಲ್ಲ. ಜ. 4ರವರೆಗೆ ಮೇಲುಕೋಟೆ ದೇವಾಲಯದಲ್ಲಿ ಯಾವುದೇ ಉತ್ಸವಗಳೂ ಇರುವುದಿಲ್ಲ. ವಿಷ್ಣುದೀಪೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.