ಕೆ.ಆರ್. ಪೇಟೆ: ಹೇಮಾವತಿ ನದಿಯ ಗೊರೂರು ಅಣೆಕಟ್ಟು ತುಂಬಿದ್ದರೂ ತಾಲ್ಲೂಕಿನ ಹೇಮಾವತಿ ನದಿ ಕಾಲುವೆ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಹರಿಸದಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಯಾವುದೇ ಜಲ ನೀತಿ ಪ್ರಕಟಿಸದೇ ಇರುವುದು ಇಲ್ಲಿನ ರೈತರ ಆತಂಕ ಹೆಚ್ಚಿಸಿದೆ.
ಕೆ.ಆರ್.ಎಸ್ ಜಲಾಶಯದಿಂದ ಕಟ್ಟು ನೀರು ಪದ್ದತಿಯಡಿ ವಿಶ್ವೇಶರಯ್ಯ ನಾಲೆಯಲ್ಲಿ ನೀರು ಹರಿಸಲಾಗುತ್ತಿದ್ದರೂ ಹೇಮಾವತಿ ಜಲಾಶಯದಿಂದ ನೀರು ಹರಿಸದಿರುವುದರಿಂದ ತಾಲ್ಲೂಕಿನ ಹೇಮಾವತಿ ನದಿ ನಾಲೆ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ನಡೆಸಲಾಗದೆ ರೈತರು ಕೈಚೆಲ್ಲಿದ್ದಾರೆ. ಎಡದಂಡೆ ನಾಲೆಗಳಲ್ಲಿ ನೀರು ಹರಿಯದಿರುವದರಿಂದ ಅಂತರ್ಜಲ ಕುಸಿದಿರುವುದಲ್ಲದೇ ಕೆರೆ- ಕಟ್ಟೆಗಳು ಒಣಗಿ ಜನ– ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಸಮಸ್ಯೆ ಕೇವಲ ಕೆ.ಆರ್.ಪೇಟೆ ರೈತರಿಗೆ ಮಾತ್ರವಲ್ಲದೆ ಪಾಂಡವಪುರ, ನಾಗಮಂಗಲದಲ್ಲೂ ಇದೆ. ಇದರಿಂದಾಗಿ ರೈತರು ಪರಿತಪಿಸುವಂತಾಗಿದೆ.
ನೀರಾವರಿ ಸಲಹಾ ಸಮಿತಿಯು ಕೆ.ಆರ್. ಎಸ್ ಜಲಾಶಯ ವ್ಯಾಪ್ತಿಯ ರೈತರಿಗೆ ಒಂದು, ಹೇಮಾವತಿ ಜಲಾಶಯ ವ್ಯಾಪ್ತಿಯ ರೈತರಿಗೊಂದು ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಲತಾಯಿ ಧೋರಣೆ ಪ್ರದರ್ಶಿಸುತ್ತದೆ. ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಹೇಮಾವತಿ ಜಲಾಶಯದಿಂದ ತುಮಕೂರು ಭಾಗಕ್ಕೆ ಹೇಮೆಯ ನೀರು ಹರಿದು ಹೋಗುತ್ತಿದ್ದರೂ ಮಂಡ್ಯ ಜಿಲ್ಲೆಗೆ ನೀರು ಹರಿಯುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಮುಖಂಡರು ಇನ್ನಾದರೂ ಈ ಬಗ್ಗೆ ಗಮನಹರಿಸಿ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು’ ಎಂದು ರಾಜ್ಯ ರೈತಸಂಘದ ಮುಖಂಡ ಮುದುಗೆರೆ ರಾಜೇಗೌಡ ಒತ್ತಾಯಿಸಿದ್ದಾರೆ.
ಶಾಸಕರ ಕಚೇರಿಯಲ್ಲಿ ರೈತರು ಈ ಸಂಬಂಧ ಮನವಿ ನೀಡಿದಾಗ ಶಾಸಕ ಎಚ್.ಟಿ. ಮಂಜು ಅವರು ದೂರವಾಣಿ ಮೂಲಕ ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಬಿ.ಟಿ. ಮಂಜುನಾಥ್ ಅವರಿಗೆ ಕರೆ ಮಾಡಿ ತಾಲ್ಲೂಕಿನ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ, ಹೇಮಗಿರಿ ಅಣೆಕಟ್ಟೆ ನಾಲೆಗಳಿಂದ ಬೇಸಿಗೆ ಬೆಳೆಗೆ ಕಾಯಂ ನೀರು ಹರಿಸುವಂತೆ ನಿರ್ದೇಶನ ನೀಡಿದ್ದಾರೆ.
‘ಕಾವೇರಿ ಜಲ ವಿವಾದಕ್ಕೂ ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಬಿಡುವುದಕ್ಕೂ ಪರಸ್ಪರ ಸಂಬಂಧವಿಲ್ಲ. ಹೇಮಾವತಿ ಜಲಾಶಯದಿಂದ ಮುಖ್ಯ ನಾಲೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಬೇಕು. ಆದರೆ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ನಾಲೆಗಳಿಗೆ ನೀರು ಬಿಡುವುದಕ್ಕೂ ನೀರಾವರಿ ಸಲಹಾ ಸಮಿತಿಗೂ ಸಂಬಂಧವಿಲ್ಲ. ತಾಲೂಕಿನ ಮಂದಗೆರೆ ಮತ್ತು ಹೇಮಗಿರಿ ನಾಲಾ ಬಯಲಿನ ಸುಮಾರು 17 ಸಾವಿರ ಎಕರೆಗೂ ಅಧಿಕ ಪ್ರದೇಶದ ರೈತರು ನಾಲೆಯಲ್ಲಿ ನೀರು ಹರಿಸುತ್ತಾರೆಂಬ ನಂಬಿಕೆಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಭತ್ತದ ಗದ್ದೆಗಳನ್ನು ಸಿದ್ಧಪಡಿಸಿ ಒಟ್ಲು ಹಾಕುತ್ತಿದ್ದಾರೆ. ನೀರು ಹರಿಸದೆ ಹೋದರೆ ರೈತರು ನಷ್ಠಕ್ಕೆ ಒಳಗಾಗಿ ಸಾಲದ ಸುಳಿಗೆ ಸಿಲುಕುತ್ತಾರೆ’ ಎಂದು ಶಾಸಕರು ಮನವರಿಕೆ ಮಾಡಿಕೊಟ್ಟರು.
‘ನಾಲೆಗಳಲ್ಲಿ ಕಟ್ಟು ನೀರು ಪದ್ದತಿಯಡಿ ನೀರು ಹರಿಸದೆ ಭತ್ತದ ಬೆಳೆಗೆ ಪೂರಕವಾಗುವಂತೆ ಕಾಯಂ ಆಗಿ ನೀರು ಹರಿಸಬೇಕು, ಹೇಮಾವತಿ ಎಡದಂಡೆ ಮುಖ್ಯ ನಾಲೆಗೆ ಕಟ್ಟು ನೀರು ಪದ್ದತಿಯಡಿ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಬೇಕು’ ಎಂದು ತಾಕೀತು ಮಾಡಿದರು.
ನೀರು ಹರಿಸಲು ಒಕ್ಕೊರಲ ಆಗ್ರಹ
ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ನೀರು ಹರಿಸುವ ಪ್ರಯತ್ನ ಮಾಡಬೇಕು.ನಾರಾಯಣಗೌಡ ಮಾಜಿ ಸಚಿವ
ನೀರು ಹರಿಯದಿರುವುದರಿಂದ ಇಷ್ಟೂ ಭಾಗದಲ್ಲಿ ಬೆಳೆವ ಭತ್ತ ಮತ್ತು ಕಬ್ಬು ತೆಂಗು ಅಡಿಕೆ ಶುಂಠಿ ರಾಗಿ. ಜೋಳ ಹಲಸಂದೆ ಹುರುಳಿ ತೆಂಗು ಅಡಿಕೆ ಬೆಳೆಗಳು ಹಾಳಾಗುತ್ತಿವೆ.ಮುದುಗೆರೆ ರಾಜೇಗೌಡ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.