ಶ್ರೀರಂಗಪಟ್ಟಣ: ಶಾಸಕ ರಮೇಶ ಬಂಡಿಸಿದ್ದೇಗೌಡ ಮಂಗಳವಾರ ಅಧಿಕಾರಿಗಳ ಜತೆಗೂಡಿ ಸತತ 6 ತಾಸುಗಳ ಕಾಲ ನಗರ ಸಂಚಾರ ನಡೆಸಿ ಜನರ ಅಹವಾಲು ಆಲಿಸಿದರು.
ಪುರಸಭೆ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಸಂಚಾರ ಆರಂಭಿಸಿದರು. ಬೋವಿ ಕಾಲೊನಿಯಲ್ಲಿ ಶಿಥಿಲಗೊಂಡಿರುವ ಮನೆಗಳನ್ನು ಪರಿಶೀಲಿಸಿದ ಅವರು ಶೀಘ್ರ ದುರಸ್ತಿ ಮಾಡಿಸಿ ಮೂಲ ಸೌಕರ್ಯ ಕಲ್ಪಿಸವಂತೆ ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಅಂಗವಿಕಲ ಮಹಿಳೆಯೊಬ್ಬರು ತ್ರಿಚಕ್ರ ವಾಹನ ಕೊಡಿಸುವಂತೆ ಮನವಿ ಮಾಡಿದರು. ದಿವಾನ್ ಪೂರ್ಣಯ್ಯ ಬೀದಿ ಬಲ ಭಾಗದ ರಸ್ತೆ ಮತ್ತು ಚರಂಡಿ ಸರಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಸ್ಥಳೀಯರು ಸಮಸ್ಯೆ ತೋಡಿಕೊಂಡರು. ‘ಲಕ್ಷ್ಮಿಗುಡಿ ವೃತ್ತದಲ್ಲಿ ಮಳೆ ನೀರು ನಿಂತು ಕೆರೆಯಂತಾಗುತ್ತದೆ. ಅಂಬೇಡ್ಕರ್ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದೆ ಸಮಸ್ಯೆಯಾಗಿದೆ’ ಎಂದು ಉಮೇಶ್ ಕುಮಾರ್ ಗಮನ ಸೆಳೆದರು.
ಕುಪ್ಪಣ್ಣ ಗರಡಿ ಬೀದಿ ಹಾಗೂ ದರ್ಜಿ ಬೀದಿಗಳಲ್ಲಿ ಚರಂಡಿ ಪಕ್ಕದಲ್ಲೇ ಗುಂಡಿ ತೆಗೆದು ನೀರು ತುಂಬಿಸಿಕೊಳ್ಳುತ್ತಿದ್ದ ಮಹಿಳೆಯರಿಗೆ, ಹಾಗೆ ಮಾಡದಂತೆ ಶಾಸಕ ತಿಳಿ ಹೇಳಿದರು.
‘ಪೇಟೆ ನಾರಾಯಣಸ್ವಾಮಿ ದೇವಾಲಯದ ಸುತ್ತ ಕಾಂಪೌಂಡ್ ಭದ್ರಪಡಿಸಬೇಕು. ದೇಗುಲದ ಆವರಣದಲ್ಲಿ ಭಕ್ತರು ಕೂರಲು ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ಅವರಿಗೆ ಹೇಳಿದರು.
ಗೋಸೇಗೌಡ ಬೀದಿ, ಗೋವಿಂದಪ್ಪ ಬೀದಿ, ಅಂಚೆಕೇರಿ ಬೀದಿಗಳಲ್ಲಿ ಶಾಸಕ ಮತ್ತು ಅಧಿಕಾರಿಗಳ ತಂಡ ಸಂಚಾರ ನಡೆಸಿತು. ಗರಡಿ ಮನೆ ಮತ್ತು ಮಹದೇಶ್ವರ ದೇವಾಲಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಭರವಸೆ ನೀಡಿದರು.
ಬತೇರಿ ಪಕ್ಕದ ನೀರು ಶುದ್ಧೀಕರಣ ಘಟಕವನ್ನು ಪರೀಶೀಲಿಸಿದರು. ನೀರು ಸಂಗ್ರಹಾಗಾರವನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಜನರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ರಮೇಶ ಬಂಡಿಸಿದ್ದೇಗೌಡ, ಜನರ ಅಹವಾಲುಗಳಿಗೆ ಸ್ಪಂದಿಸಿ ನನಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ತಾಲ್ಲೂಕು ಪಂಚಾಯಿತಿ ಇಒ ವೇಣು, ಎಂಜಿನಿಯರ್‌ಗಳಾದ ರಾಮಕೃಷ್ಣೇಗೌಡ, ಮಂಜುನಾಥ್, ಜಸ್ವಂತ್, ಸೆಸ್ಕ್ ಎಇಇ ಮಂಜುನಾಥಪ್ರಸಾದ್, ಆರ್‌ಎಫ್‌ಒ ವಿನೋದಗೌಡ, ಸಿಡಿಪಿಒ ಮೇಘ, ಬಿಇಒ ಆರ್.ಪಿ. ಮಹೇಶ್, ಸಿಪಿಐ ಬಿ.ಎಸ್. ಪ್ರಕಾಶ್, ಎಸ್‌ಐ ಶಿವಲಿಂಗ ದಳವಾಯಿ ನಗರ ಸಂಚಾರದಲ್ಲಿ ಪಾಲ್ಗೊಂಡಿದ್ದರು.
ಶಾಸಕರ ಜತೆಗೂಡಿದ ನ್ಯಾಯಾಧೀಶರು
ಪೇಟೆ ಬೀದಿಯಲ್ಲಿ ಮನೆಯೊಂದು ಮುರಿದು ಬಿದ್ದಿರುವ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭೇಟಿ ನೀಡಿದ ವೇಳೆ ಪಟ್ಟಣದ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲಕೃಷ್ಣ ರೈ ಮತ್ತು ಹರೀಶಕುಮಾರ್ ಎಂ. ಅವರು ಅಲ್ಲಿಗೆ ಬಂದರು. ಚಾವಣಿಯೇ ಇಲ್ಲದ ಮನೆಯಲ್ಲಿ ಮಹಿಳೆಯೊಬ್ಬರು ವಾಸ ಮಾಡುತ್ತಿರುವುದನ್ನು ಕಂಡು ಮಮ್ಮಲ ಮರುಗಿದರು. ಮನೆಯ ಅವಶೇಷಗಳನ್ನು ತೆರವು ಮಾಡಿಸಿ ಆದಷ್ಟು ಶೀಘ್ರ ಹೊಸದಾಗಿ ಮನೆ ನಿರ್ಮಿಸಿಕೊಡಿ ಎಂದು ಶಾಸಕ ಮತ್ತು ನ್ಯಾಯಾಧೀಶರು ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಹಿಳೆಗೆ ಚಿಕಿತ್ಸೆ ಕೊಡಿಸುವಂತೆ ಟಿಎಚ್‌ಒ ಡಾ.ಆಶಾಲತಾ ಅವರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.