ಮಳವಳ್ಳಿ: ಪಟ್ಟಣದ ರೋಟರಿ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಳವಳ್ಳಿ ಯುವಕ ಮಿತ್ರರು ಹಾಗೂ ಸಂಘ-ಸಂಸ್ಥೆಗಳು ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದಲ್ಲಿ ದಾಖಲೆಯ 1100 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಮಂಡ್ಯದ ಸರ್ಕಾರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ(ಮಿಮ್ಸ್), ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಚಾಮರಾಜನಗರದ ಸರ್ಕಾರಿ ಜಿಲ್ಲಾಸ್ಪತ್ರೆ, ಮೈಸೂರಿನ ಕೆ.ಆರ್.ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದ ಶಿಬಿರದಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ರಕ್ತದಾನಿಗಳು ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಹೈಕೋರ್ಟ್ ನ್ಯಾಯಾಧೀಶರಾದ ರಾಚಯ್ಯ ಭಾಗವಹಿಸಿ ಮಾತನಾಡಿ, ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೊಬ್ಬರಿಗೆ ನೀಡಿ ಜೀವ ಉಳಿಸುವಂಥ ಕೆಲಸ ನಿಜಕ್ಕೂ ಶ್ರೇಷ್ಠ. ವಿವಿಧ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಂದಲೂ ಬಂದು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನ್ಯಾಯಾಂಗದ ಪರವಾಗಿ ಅಭಿನಂದನೆ, ಅಲ್ಲದೇ ಮುಂದಿನ ದಿನಗಳ್ಲಲಿನಾವು ಕೂಡ ಇಂತಹ ಸೇವೆಗೆ ಕೈಜೋಡಿಸುವುದಾಗಿ ಹೇಳಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶಿಬಿರದ ಮಾತನಾಡಿ, ‘ಮಳವಳ್ಳಿ ಯುವಕ ಮಿತ್ರರು ನಿರಂತರವಾಗಿ ರಕ್ತದಾನ ಶಿಬಿರ, ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ರಾಜ್ಯದ ಗಮನ ಸೆಳೆದಿರುವುದು ಹೆಮ್ಮೆ ವಿಷಯ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಡಿಜಿಪಿ ನಂಜುಂಡಸ್ವಾಮಿ, ಮಾಜಿ ಯೋಧ ನಾಗರಾಜು, ಪುಸ್ತಕ ಪ್ರೇಮಿ ಅಂಕೇಗೌಡ, ಸಮಾಜ ಸೇವಕ ನಾಗರಾಜು, ಪ್ರಜಾವಾಣಿ ಹಿರಿಯ ಪ್ರತಿನಿಧಿ ಎ.ಎಸ್.ಪ್ರಭಾಕರ್ ಅವರನ್ನು ಅಭಿನಂದಿಸಲಾಯಿತು.
ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐಗಳಾದ ಮಹೇಂದ್ರ, ರವಿಕುಮಾರ್, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪುತ್ರ ಯುವರಾಜ್ ರಕ್ತದಾನ ಮಾಡಿದರು.
ಪಟ್ಟಣದ ನ್ಯಾಯಾಧೀಶ ವಿ.ಮಾದೇಶ್, ಮಮತಾ ಶಿವಪೂಜಿ, ಸಚಿನ್ಕುಮಾರ್ ಶಿವಪೂಜಿ, ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್. ಶಿವಣ್ಣ, ಆದರ್ಶ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾಧವ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.