ಮದ್ದೂರು: ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು, ಪ್ರಕರಣದಲ್ಲಿ ಪರಿಹಾರ ಅರ್ಜಿಯ ವಿಚಾರಣೆಗೆ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಾಗದೆ ಕುಳಿತಿದ್ದ ಕಕ್ಷಿದಾರನ ಬಳಿಗೆ ತೆರಳಿ ನ್ಯಾಯಾಧೀಶರು ವಿಮೆ ಪರಿಹಾರ ಹಣ ಬಿಡುಗಡೆಗೆ ಆದೇಶ ನೀಡಿದ ಪ್ರಕರಣ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಜೆಎಂಎಫ್‌ಸಿ ಸಿವಿಲ್ ಕೋರ್ಟ್ ನ್ಯಾಯಾಧೀಶೆ ಹರಿಣಿ ಮಾನವೀಯತೆ ಮೆರೆದವರು. ಅವರ ಕ್ರಮಕ್ಕೆ ವಕೀಲ ವೃಂದ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸಿ.ಎ.ಕೆರೆ ಹೋಬಳಿಯ ರೈತ ಮಾದೇಗೌಡ (58) ಜೂನ್‌ನಲ್ಲಿ ರಸ್ತೆ ಬದಿ ನಡೆದು ಹೋಗುವಾಗ ಕಾರು ಡಿಕ್ಕಿ ಹೊಡೆದು ಅವರ ಕಾಲು ಮುರಿದಿತ್ತು. ಮಾದೇಗೌಡ ವಿಮೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಶನಿವಾರ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಬಂದಿತ್ತು. ಮಾದೇಗೌಡ ಅವರಿಗೆ ಮೆಟ್ಟಿಲು ಹತ್ತಿ ಕೋರ್ಟ್ ಹಾಲ್‌ಗೆ ಬರಲು ಸಾಧ್ಯವಿಲ್ಲ ಎಂಬ ವಿಷಯ ತಿಳಿದ ನ್ಯಾಯಾಧೀಶೆ ತಾವೇ ಕೆಳ ಅಂತಸ್ತಿಗೆ ಇಳಿದು ಬಂದು ಮಾದೇಗೌಡರೊಂದಿಗೆ ಬಳಿ ಮಾತನಾಡಿ ದಾಖಲಾತಿ ಪರಿಶೀಲನೆ ನಡೆಸಿ ವಿಮಾ ಕಂಪನಿಯಿಂದ ₹2.5 ಲಕ್ಷ ಪರಿಹಾರ ಕೊಡಿಸಲು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.